ADVERTISEMENT

ತುಮಕೂರು | ಸಕಾಲಕ್ಕೆ ವೀಸಾ ಕೊಡದೆ ಲೋಪ: ₹ 50 ಸಾವಿರ ಪರಿಹಾರಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:36 IST
Last Updated 6 ಜನವರಿ 2026, 6:36 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ತುಮಕೂರು: ಸಕಾಲಕ್ಕೆ ವೀಸಾ ಕೊಡಿಸದೆ ಸೇವಾ ಲೋಪವೆಸಗಿದ್ದ ಅಟ್ಲಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ದೂರುದಾರರಿಗೆ ₹64,900 ಮರಳಿಸಬೇಕು. ₹40 ಸಾವಿರ ಪರಿಹಾರ ಹಾಗೂ ದಾವೆ ವೆಚ್ಚವಾಗಿ ₹10 ಸಾವಿರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ನಗರದ ಸೋಮೇಶ್ವರ ಪುರಂನ ಕೆ.ಎನ್.ನಿಶಾಂತ್ ರಾಜ್ ಹಾಗೂ ಇತರರು ಬಾಲಿ, ಸಿಂಗಾಪುರ ಇತರ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಅಟ್ಲಿಸ್ ಇಂಡಿಯಾದ ಸಂಸ್ಥೆ ಆ್ಯಪ್ ಮೂಲಕ 10 ಜನವರಿ 2024ರಂದು ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಶುಲ್ಕ ₹8,270 ಸಹ ಪಾವತಿಸಿದ್ದರು. ಜನವರಿ 27ರ ಒಳಗೆ ವೀಸಾ ಸಿಗಲಿದೆ ಎಂದು ಆ ಸಂಸ್ಥೆ ಕಡೆಯಿಂದ ಭರವಸೆ ಸಿಕ್ಕಿತ್ತು.

ADVERTISEMENT

ಸಂಸ್ಥೆ ಮನವಿ ಮೇರೆಗೆ ಜನವರಿ 14ರಂದು ಮತ್ತೆ ದಾಖಲೆಗಳನ್ನು ದೂರುದಾರರು ಸಲ್ಲಿಸಿದ್ದರು. ಪದೇಪದೇ ದಾಖಲೆಗಳನ್ನು ಸಲ್ಲಿಸುವಂತೆ ಹೇಳಿ, ದಾಖಲೆ ಪಡೆದುಕೊಳ್ಳಲಾಯಿತೇ ಹೊರತು ವೀಸಾ ಸಿಗಲಿಲ್ಲ. ನಂತರ ಸಂಸ್ಥೆ ಕಡೆಯಿಂದ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಮತ್ತೊಮ್ಮೆ ಜನವರಿ 28ರಂದು ದಾಖಲೆ ಸಲ್ಲಿಸುವಂತೆ ಸಂಸ್ಥೆ ಸಿಬ್ಬಂದಿ ದೂರವಾಣಿ ಕರೆಮಾಡಿ ತಿಳಿಸಿದ್ದರು. ಆಗಲೂ ದಾಖಲೆ ಸಲ್ಲಿಸಲಾಗಿದೆ. ಕೊನೆಗೂ ವೀಸಾ ಸಿಕ್ಕಿಲ್ಲ. ದೂರುದಾರರು ಕರೆಮಾಡಿ ವಿಚಾರಿಸಿದರೂ ಸ್ಪಂದಿಸಿಲ್ಲ. ಯಾವುದೇ ಮಾಹಿತಿ ಲಭ್ಯವಾಗಿಲ್ಲ.

‘ಅಟ್ಲಿಸ್ ಇಂಡಿಯಾದ ಚೆನ್ನೈ ವಿಭಾಗದ ಕಚೇರಿಯು ವೀಸಾಗೆ ಅರ್ಜಿ ಸಲ್ಲಿಸಲು ಅಧಿಕೃತ ಸಂಸ್ಥೆಯಾಗಿರಲಿಲ್ಲ. ಚೆನ್ನೈನಲ್ಲಿರುವ ಸಿಂಗಾಪುರ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಸಂಪರ್ಕಿಸಿದ ಸಮಯದಲ್ಲಿ ಈ ವಿಚಾರವನ್ನು ಖಚಿತಪಡಿಸಿದೆ. ವೀಸಾಗೆ ಅರ್ಜಿ ಸಲ್ಲಿಸಲು ಅಧಿಕೃತ ಸಂಸ್ಥೆ ಅಲ್ಲದಿದ್ದರೂ ನಮ್ಮಿಂದ ಅರ್ಜಿ ಸಲ್ಲಿಸಿಕೊಂಡು, ಶುಲ್ಕದ ಹಣ ಪಡೆದುಕೊಂಡು ವಂಚಿಸಿದೆ. ಮತ್ತೆ ಅರ್ಜಿ ಸಲ್ಲಿಸಿ ಫೆಬ್ರುವರಿ 1ರಂದು ವೀಸಾ ಪಡೆದುಕೊಳ್ಳಲಾಯಿತು. ವೀಸಾ ಸಿಗುವುದು ಸಾಕಷ್ಟು ತಡವಾಗಿದ್ದರಿಂದ ವಿದೇಶಿ ಪ್ರವಾಸವನ್ನು ರದ್ದುಪಡಿಸಬೇಕಾಯಿತು’ ಎಂದು ನಿಶಾಂತ್ ರಾಜ್ ಆಯೋಗಕ್ಕೆ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಿದ್ದರು.

ತಪ್ಪು ಮಾಹಿತಿ, ಸೇವಾ ಲೋಪ ಹಾಗೂ ಅನಪೇಕ್ಷಿತ ವ್ಯಾಪಾರದಿಂದಾಗಿ ಸಾಕಷ್ಟು ನಷ್ಟ, ಮಾನಸಿಕ ಹಿಂಸೆ ಅನುಭವಿಸಬೇಕಾಯಿತು. ಹಾಗಾಗಿ ₹5 ಲಕ್ಷ ಪರಿಹಾರ, ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದಕ್ಕಾಗಿ ₹1.50 ಲಕ್ಷ, ₹2 ಲಕ್ಷ ಪರಿಹಾರವನ್ನು ಶೇ 18ರ ಬಡ್ಡಿ ಸಹಿತ ಕೊಡಿಸುವಂತೆ ದೂರು ಅರ್ಜಿಯಲ್ಲಿ ಮನವಿ ಮಾಡಿದ್ದರು.

‘ಅಟ್ಲಿಸ್ ಇಂಡಿಯಾ ಸಂಸ್ಥೆಯು ವೀಸಾ ವಿತರಿಸುವ ಅಧಿಕೃತ ಸಂಸ್ಥೆಯಲ್ಲ. ವೀಸಾ ಪಡೆದುಕೊಳ್ಳಲು ಡಿಜಿಟಲ್ ಮೂಲಕ ನೆರವು ನೀಡಲಾಗುತ್ತದೆ. ಇದರಲ್ಲಿ ನಮ್ಮ ಪಾತ್ರವಿಲ್ಲ. ನಮ್ಮ ಕಡೆಯಿಂದ ಯಾವುದೇ ರೀತಿಯಲ್ಲೂ ಲೋಪವಾಗಿಲ್ಲ’ ಎಂದು ಸಂಸ್ಥೆ ವಾದಿಸಿತ್ತು. ಆದರೆ ಸಮರ್ಪಕ ದಾಖಲೆಗಳನ್ನು ಸಲ್ಲಿಸಿರಲಿಲ್ಲ.

ವಾದ– ಪ್ರತಿವಾದ ಆಲಿಸಿದ ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠವು ಸೇವೆಯಲ್ಲಿ ಲೋಪವಾಗಿರುವುದನ್ನು ಪರಿಗಣಿಸಿ ಪರಿಹಾರಕ್ಕೆ ಆದೇಶಿಸಿದೆ. ವಕೀಲರಾದ ಆರ್.ಕೃಷ್ಣ, ಎ.ಕಾವ್ಯಪ್ರಿಯ ವಾದ ಮಂಡಿಸಿದ್ದರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.