
ತುಮಕೂರು: ಜಿಲ್ಲೆಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಮಹಾನಗರ ಪಾಲಿಕೆಯಿಂದ ಆರಂಭಿಸಿರುವ ಪ್ರಯೋಗಾಲಯ ಕೇವಲ ತುಮಕೂರು ನಗರಕ್ಕೆ ಮಾತ್ರ ಸೀಮಿತವಾಗಿದೆ.
ನವೆಂಬರ್ ತಿಂಗಳಲ್ಲಿ ಒಟ್ಟು 372 ಮಾದರಿ ಪರೀಕ್ಷಿಸಲಾಗಿದೆ. ಇದರಲ್ಲಿ 261 ಮಾದರಿಗಳನ್ನು ಪಾಲಿಕೆಯಿಂದ ನೀಡಲಾಗಿದೆ. ಶೇ 70ರಷ್ಟು ಮಾದರಿಗಳು ಮಹಾನಗರದಿಂದಲೇ ಹೋಗುತ್ತಿವೆ. 30 ನೀರಿನ ಮಾದರಿಗೆ ಕುಡಿಯಲು ಯೋಗ್ಯವಲ್ಲ ಎಂಬ ವರದಿ ನೀಡಲಾಗಿದೆ.
ನಗರ ಹೊರವಲಯ ಪಿಎನ್‌ಆರ್ ಪಾಳ್ಯದ ಜಲ ಶುದ್ಧೀಕರಣ ಘಟಕದಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಪ್ರತಿ ದಿನ 28 ನೀರಿನ ಮಾದರಿ ಪರೀಕ್ಷಿಸಲಾಗುತ್ತದೆ. ನಗರದ ಮನೆಗಳಿಗೆ ಪೂರೈಕೆಯಾಗುವ ನೀರಿನ 20 ಮಾದರಿ, ಬುಗುಡನಹಳ್ಳಿ ಕೆರೆಯ 2, ಪಿಎನ್‌ಆರ್ ಪಾಳ್ಯದ ಜಲ ಶುದ್ಧೀಕರಣ ಘಟಕದ 3 ಮಾದರಿ, ಸಂತೆಪೇಟೆ, ವಿದ್ಯಾನಗರ, ಸಿಎಂಸಿ ಪಂಪ್ ಹೌಸ್‌ನ ತಲಾ 1 ಮಾದರಿ ಪರೀಕ್ಷಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಕುಡಿಯುವ ನೀರಿನ ಮಾದರಿ ಪರೀಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೆ ನಗರ, ಪಟ್ಟಣದ ವ್ಯಾಪ್ತಿಯಲ್ಲಿಯೇ ಮಾದರಿ ಪರೀಕ್ಷಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಅಸ್ವಸ್ಥರಾದಾಗ, ಯಾವುದಾದರೂ ಹಳ್ಳಿಯಲ್ಲಿ ನೀರು ಸೇವಿಸಿ ಜನರು ಆಸ್ಪತ್ರೆಯ ಹಾಸಿಗೆ ಹಿಡಿದಾಗ ಮಾತ್ರ ನೀರಿನ ಪರೀಕ್ಷೆ ಬಗ್ಗೆ ಚರ್ಚೆ ಶುರುವಾಗುತ್ತದೆ. ಉಳಿದ ದಿನಗಳಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಂದ ಸಕಾಲಕ್ಕೆ ನೀರಿನ ಮಾದರಿ ಪರೀಕ್ಷೆ ಕಾರ್ಯ ನಡೆಯುತ್ತಿಲ್ಲ. ಪ್ರಯೋಗಾಲಯ ಪ್ರಾರಂಭದ ಎರಡು ತಿಂಗಳಲ್ಲಿ ಚಿಕ್ಕನಾಯಕನಹಳ್ಳಿ ಪುರಸಭೆಯಿಂದ ಒಂದೇ ಒಂದು ನೀರಿನ ಮಾದರಿ ಸಹ ಪ್ರಯೋಗಾಲಯಕ್ಕೆ ಬಂದಿರಲಿಲ್ಲ. ಮೂರು ತಿಂಗಳ ನಂತರ ಕಾಟಾಚಾರಕ್ಕೆ ಎಂಬಂತೆ ಮಾದರಿ ಪರೀಕ್ಷೆ ನಡೆಸಲಾಗಿದೆ.
‘ಕೆಲವೊಮ್ಮೆ ಸ್ಥಳೀಯ ಸಂಸ್ಥೆಗಳಿಂದ ಜನ ವಸತಿ ಪ್ರದೇಶಗಳಿಗೆ ಪೂರೈಕೆ ಮಾಡುವ ನೀರನ್ನು ಪ್ರಯೋಗಾಲಯಕ್ಕೆ ತರುವುದಿಲ್ಲ. ಬದಲಾಗಿ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನೇ ಪರೀಕ್ಷೆಗೆ ಕಳುಹಿಸುತ್ತಾರೆ. ಇದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ನೀರಿನ ಮೂಲದಿಂದಲೇ ಸಂಗ್ರಹಿಸಿ ತಂದರೆ ಗುಣಮಟ್ಟ ಪರೀಕ್ಷೆಗೆ ಸಹಾಯವಾಗಲಿದೆ. ಕೆಲವರು ‘ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳಲು’ ಇಂತಹ ಕೆಲಸ ಮಾಡುತ್ತಾರೆ. ಹಾಗಾಗಿ ನಿಖರ ಮಾಹಿತಿ ಸಿಗುವುದಿಲ್ಲ’ ಎಂದು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ವಾಸ್ತವ ತೆರೆದಿಟ್ಟರು.
ನವೆಂಬರ್‌ನಲ್ಲಿ ನಡೆದ ನೀರಿನ ಮಾದರಿ ಪರೀಕ್ಷೆ
ನಗರ ಸ್ಥಳೀಯ ಸಂಸ್ಥೆ; ಮಾದರಿ; ಕುಡಿಯಲು ಯೋಗ್ಯವಲ್ಲ
ಮಹಾನಗರ ಪಾಲಿಕೆ; 261; 05
ತಿಪಟೂರು;16;03
ಶಿರಾ;14;02
ಚಿಕ್ಕನಾಯಕನಹಳ್ಳಿ; 04; 00
ಪಾವಗಡ; 12; 02
ಕುಣಿಗಲ್; 09; 04
ಮಧುಗಿರಿ; 10; 00
ಕೊರಟಗೆರೆ; 10; 02
ಗುಬ್ಬಿ; 09; 07
ತುರುವೇಕೆರೆ; 22; 03
ಹುಳಿಯಾರು; 05; 02
ಒಟ್ಟು; 372; 30
ಶುದ್ಧೀಕರಣ ಘಟಕದ ನೀರು ಎಷ್ಟು ಶುದ್ಧ?
ಹೊಸ ಪ್ರಯೋಗಾಲಯ ಪ್ರಾರಂಭವಾದ ನಂತರ ನಗರದ ಶುದ್ಧ ಕುಡಿಯುವ ನೀರಿನ ಘಟಕದ ಮಾದರಿ ಪರೀಕ್ಷೆ ಕಾರ್ಯ ನಡೆದಿಲ್ಲ. ನಗರದ ಜನರು ಘಟಕಗಳ ನೀರು ಕುಡಿಯುವ ಮುನ್ನ ಎಷ್ಟು ಪರಿಶುದ್ಧ ಎಂಬುವುದನ್ನು ಖಚಿತ ಪಡಿಸಿಕೊಳ್ಳಬೇಕಿದೆ. ಮಹಾನಗರ ಪಾಲಿಕೆ ಆಡಳಿತದ ವ್ಯಾಪ್ತಿಯಲ್ಲಿ 17 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಉಸ್ತುವಾರಿಯನ್ನು ಖಾಸಗಿಯವರಿಗೆ ವಹಿಸಿಕೊಡಲಾಗಿದೆ. ಪಾಲಿಕೆ ಹೊರತುಪಡಿಸಿ ಖಾಸಗಿ ಸಂಘ ಸಂಸ್ಥೆಗಳು ಬೀದಿಗೆ ಒಂದರಂತೆ ನೀರಿನ ಘಟಕ ತೆರೆದಿವೆ. ಅವುಗಳಲ್ಲಿ ನಿಗದಿತ ಸಮಯಕ್ಕೆ ಗುಣಮಟ್ಟ ಪರೀಕ್ಷಿಸುತ್ತಿಲ್ಲ.
ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ‘ಘಟಕದಿಂದ ನೀರು ತಂದ ಮೂರು–ನಾಲ್ಕು ದಿನಕ್ಕೆ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಒಮ್ಮೊಮ್ಮೆ ಕೆಟ್ಟ ವಾಸನೆ ಬರುತ್ತದೆ. ಕೆಲವು ಘಟಕಗಳಲ್ಲಿ ನೀರು ಪರೀಕ್ಷೆ ಸರಿಯಾಗಿ ಆಗುತ್ತಿಲ್ಲ. ದೋಬಿಘಾಟ್ ಮುನ್ಸಿಪಲ್ ಲೇಔಟ್‌ನ ಘಟಕಗಳಲ್ಲಿ ನೀರನ್ನು ಸರಿಯಾಗಿ ಶುದ್ಧೀಕರಿಸುತ್ತಿಲ್ಲ. ಅನಿವಾರ್ಯವಾಗಿ ನೀರು ಸೇವಿಸಬೇಕಾಗಿದೆ’ ಎಂದು ಅಶೋಕ ನಗರದ ರಾಜೇಶ್ ಬೇಸರ ವ್ಯಕ್ತಪಡಿಸಿದರು.
14 ನಿಯತಾಂಕ ಪರೀಕ್ಷೆ
ಪ್ರಯೋಗಾಲಯದಲ್ಲಿ ಭೌತಿಕ ರಾಸಾಯನಿಕ ಜೈವಿಕ ನಿಯತಾಂಕಗಳನ್ನು (ಪ್ಯಾರಮೀಟರ್ಸ್) ಪರೀಕ್ಷೆ ಮಾಡಬಹುದು. ವಾಸನೆ ಬಣ್ಣ ರುಚಿ ಪವರ್ ಆಫ್ ಹೈಡ್ರೊಜನ್ ಟರ್ಬಿಲಿಟಿ ಟಿಡಿಎಸ್ ಟೊಟಲ್ ಡಿಸಾಲ್ವ್ ಸಾಲಿಡ್ ಸೇರಿ ಒಟ್ಟು 14 ನಿಯತಾಂಕ ಪರೀಕ್ಷೆ ನಡೆಸಲಾಗುತ್ತದೆ. ನೀರಿನಲ್ಲಿ ಲವಣಾಂಶ ಕ್ಲೋರೈಡ್ ನೈಟ್ರೇಟ್ ಸಲ್ಟೇಟ್ ಕಾರ್ಬೋನೆಟ್ ಕ್ಯಾಲ್ಸಿಯಂ ಸೇರಿದಂತೆ ವಿವಿಧ ಅಂಶಗಳು ಎಷ್ಟು ಪ್ರಮಾಣದಲ್ಲಿದೆ ಎಂಬುದು ಸಹ ತಿಳಿಯಲಿದೆ. ಪ್ರಯೋಗಾಲಯದಲ್ಲಿ ಗುಣಮಟ್ಟ ಪರೀಕ್ಷೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಿಲ್ಲ. ಕೇವಲ ಮೂರು ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅವರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.