ADVERTISEMENT

ಶಿರಾ: ಉಸ್ತುವಾರಿ ಸಚಿವರ ಹೇಳಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:07 IST
Last Updated 25 ಜುಲೈ 2021, 3:07 IST
ಮದಲೂರು ಕೆರೆಗೆ ಕಳೆದ ವರ್ಷ ಚಾನಲ್ ಮೂಲಕ ನೀರು ಹರಿದಿತ್ತು
ಮದಲೂರು ಕೆರೆಗೆ ಕಳೆದ ವರ್ಷ ಚಾನಲ್ ಮೂಲಕ ನೀರು ಹರಿದಿತ್ತು   

ಶಿರಾ: ಮದಲೂರು ಕೆರೆಗೆ ನೀರು ಹರಿಸಿದರೆ ಜೈಲಿಗೆ ಕಳುಹಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿರುವುದಕ್ಕೆ ತಾಲ್ಲೂಕಿನ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹೇಮಾವತಿ ನೀರು ಹರಿಸುವ ವಿಚಾರವಾಗಿ ನಡೆದ ಚರ್ಚೆಯ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಶಿರಾ ಮತ್ತು ಕಳ್ಳಂಬೆಳ್ಳ ಕೆರೆಗೆ ಮಾತ್ರ ಹೇಮಾವತಿ ನೀರು ಹರಿಸಿ ಮದಲೂರು ಕೆರೆಗೆ ನೀರು ನಿಗದಿಗೊಳಿಸಿಲ್ಲ. ಒಂದು ವೇಳೆ ನೀರು ಹರಿಸಿದರೆ ಜೈಲಿಗೆ ಕಳುಹಿಸುವುದಾಗಿ ನೀಡಿರುವ ಎಚ್ಚರಿಕೆಗೆ ಆಕ್ಷೇಪ ವ್ಯಕ್ತವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತಾರೂಢ ಬಿಜೆಪಿಯಿಂದಲೂ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ಗಳಲ್ಲಿ ಜನರಿಂದ ವಿರೋಧ ವ್ಯಕ್ತವಾಗಿದೆ.

ADVERTISEMENT

ಮುಖ್ಯಮಂತ್ರಿ ಮದಲೂರು ಕೆರೆಯನ್ನು ಆರು ತಿಂಗಳಲ್ಲಿತುಂಬಿಸಿ ಬಾಗಿನ ಅರ್ಪಿಸುವುದಾಗಿ ಹೇಳಿದ್ದರು. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವರು ನೀರು ಹರಿಸಿದರೆ ಜೈಲಿಗೆ ಹಾಕುವುದಾಗಿ ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಮುಖ್ಯಮಂತ್ರಿ ಮಾತಿಗೆ ಬೆಲೆ ಇಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಕೆಲವರು ಕಳೆದ ಬಾರಿ ಕೆರೆಗೆ ನೀರು ಹರಿಸುತ್ತಿರುವ ಫೊಟೊ ಹಾಕಿಕೊಂಡು ನೀರು ಹರಿಸಲು ಕಾರಣರಾದ ಮುಖ್ಯಮಂತ್ರಿ ಅವರನ್ನು ಜೈಲಿಗೆ ಕಳುಹಿಸುವಿರಾ ಎಂದು ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.