ADVERTISEMENT

ಹುಳಿಯಾರಿನಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 3:55 IST
Last Updated 30 ಜುಲೈ 2020, 3:55 IST
ಹುಳಿಯಾರು ಪಟ್ಟಣದ ತೊರೆಸೂರಗೊಂಡನಹಳ್ಳಿ ರಸ್ತೆಯ ಹನುಮಂತಪ್ಪ ಬಿಲ್ಡಿಂಗ್‌ ಅನ್ನು ಸಾನಿಟೈಸ್‌ ಮಾಡಿ ಸೀಲ್‌ಡೌನ್‌ ಮಾಡಲಾಯಿತು.
ಹುಳಿಯಾರು ಪಟ್ಟಣದ ತೊರೆಸೂರಗೊಂಡನಹಳ್ಳಿ ರಸ್ತೆಯ ಹನುಮಂತಪ್ಪ ಬಿಲ್ಡಿಂಗ್‌ ಅನ್ನು ಸಾನಿಟೈಸ್‌ ಮಾಡಿ ಸೀಲ್‌ಡೌನ್‌ ಮಾಡಲಾಯಿತು.   

ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ 8 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಪಟ್ಟಣದ ಬಿ.ಎಚ್‌.ರಸ್ತೆಯಲ್ಲಿರುವ ಐಐಎಫ್‌ಎಲ್‌ ಗೋಲ್ಡ್‌ ಲೋನ್‌ ಶಾಖೆಯ ವ್ಯವಸ್ಥಾಪಕ ಕಳೆದ ವಾರದಿಂದಲೂ ಜ್ವರದಿಂದ ಬಳಲುತ್ತಿದ್ದರು. ರಜೆ ಹಾಕಿ ಊರಿಗೆ ತೆರಳಿದ್ದರು. ನಂತರ ಅಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ಬಂದ ಕಾರಣ ಮತ್ತೆ ಕೆಲಸಕ್ಕೆ ಹೋಗಲು ಹುಳಿಯಾರಿಗೆ ಬಂದಿದ್ದರು. ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಂಗಳವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನಂತರ ಕೋವಿಡ್‌ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಬಂದಿದೆ.

ಅವರ ಸಂಪರ್ಕದಲ್ಲಿದ್ದ ಪತ್ನಿ ಹಾಗೂ ಮಗನಿಗೆ ಸೋಂಕು ದೃಢವಾಗಿದೆ. ಇನ್ನೂ ತೊರೆಸೂರಗೊಂಡನಹಳ್ಳಿ ರಸ್ತೆಯ ಹನುಮಂತಪ್ಪ ಬಿಲ್ಡಿಂಗ್‌ನಲ್ಲಿರುವ ಖಾಸಗಿ ಹಣಕಾಸು ಕಂಪನಿಯ ಮೂರು ಮಂದಿಗೆ ಕೊರೊನಾ ದೃಢಪಟ್ಟಿದೆ. ಸಾಲ ಪಡೆಯಲು ಬಂದಿದ್ದವರಲ್ಲಿ ಈಗ ಆತಂಕ ಶುರುವಾಗಿದೆ.

ADVERTISEMENT

ಇತ್ತೀಚಿಗೆ ಪಾಸಿಟಿವ್‌ ಬಂದಿದ್ದ ಪಟ್ಟಣದ ಸುಣ್ಣದಗೂಡಿನ ನಿವಾಸಿ ಬುಧವಾರ ಬೆಳಿಗ್ಗೆ ತುಮಕೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಂತಿಮ ಸಂಸ್ಕಾರವನ್ನು ಹುಳಿಯಾರಿನ ಕೆರೆಯಲ್ಲಿ 4 ಮಂದಿ ಸಂಬಂಧಿಕರು ಸುರಕ್ಷತಾ ವಿಧಾನ ಅನುಸರಿಸಿ ಪೊಲೀಸರ ಸಮ್ಮುಖದಲ್ಲಿ ನೆರವೇರಿಸಿದರು.

ರ್‍ಯಾಪಿಡ್‌ ಪರೀಕ್ಷೆ; ಇಬ್ಬರಿಗೆ ಸೋಂಕು

ತೋವಿನಕೆರೆ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಿದ ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆಯಿಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ತುಮಕೂರು ನೋಂದಣಾಧಿಕಾರಿ ಕಚೇರಿ ಹತ್ತಿರ ಕೆಲಸ ಮಾಡುತ್ತಿದ್ದ ಮಣುವಿನಕುರಿಕೆ ಗ್ರಾಮದ ಪುರುಷರೊಬ್ಬರಲ್ಲಿ ಸೋಂಕು ದೃಢವಾಗಿತ್ತು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನು ಆರೋಗ್ಯ ಕೇಂದ್ರದಲ್ಲಿ ಬುಧವಾರ ರ್‍ಯಾಪಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ಕುಟುಂಬದ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.