ADVERTISEMENT

ತುರುವೇಕೆರೆ: 12 ಗಂಟೆ ನಂತರ ಜನತಾ ಕರ್ಫ್ಯೂ

ಇಂದಿನಿಂದ 12 ಗಂಟೆಯವರೆಗೆ ಮಾತ್ರ ತೆರೆಯಲಿವೆ ಅಂಗಡಿಗಳು

​ಪ್ರಜಾವಾಣಿ ವಾರ್ತೆ
Published 22 ಮೇ 2020, 16:47 IST
Last Updated 22 ಮೇ 2020, 16:47 IST
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರುವೇಕೆರೆ ಮತ್ತು ಗುಬ್ಬಿ ತಾಲ್ಲೂಕಿನ ಪೊಲೀಸ್, ಆರೋಗ್ಯ ಇಲಾಖೆ ಹಾಗು ತಾಲ್ಲೂಕು ಆಡಳಿತದ ಜಂಟಿ ಸಭೆಯು ಶಾಸಕ ಮಸಾಲಜಯರಾಂ ಹಾಗು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ನೇತೃತ್ವದಲ್ಲಿ ಶುಕ್ರವಾರ ಜರುಗಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರುವೇಕೆರೆ ಮತ್ತು ಗುಬ್ಬಿ ತಾಲ್ಲೂಕಿನ ಪೊಲೀಸ್, ಆರೋಗ್ಯ ಇಲಾಖೆ ಹಾಗು ತಾಲ್ಲೂಕು ಆಡಳಿತದ ಜಂಟಿ ಸಭೆಯು ಶಾಸಕ ಮಸಾಲಜಯರಾಂ ಹಾಗು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ನೇತೃತ್ವದಲ್ಲಿ ಶುಕ್ರವಾರ ಜರುಗಿತು.   

ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಶನಿವಾರದಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯಬೇಕು. ನಂತರ ಕರ್ಫ್ಯೂ ಜಾರಿ ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಶಾಸಕ ಮಸಾಲ ಜಯರಾಮ್‌ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರುವೇಕೆರೆ ಮತ್ತು ಗುಬ್ಬಿ ತಾಲ್ಲೂಕಿನ ಪೊಲೀಸ್, ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ಜಂಟಿ ಸಭೆ ನಡೆಸಿ ಮಾತನಾಡಿದರು.

ಮುಂಬೈನಿಂದ ಬಂದು ತಾಲ್ಲೂಕಿನಲ್ಲಿ ಕ್ವಾರಂಟೈನ್‌ನಲ್ಲಿದ್ದ 4 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ, ವರ್ತಕರು, ಬೀದಿಬದಿ ವ್ಯಾಪಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸಲಹೆ ಪಡೆದು ಈ ಹಿಂದೆ ಇದ್ದ ನಿಗಧಿತ ಅವಧಿಯ ಕರ್ಫ್ಯೂವನ್ನು ಮೇ 23ರಿಂದ 30ರವರೆಗೆ ಜಾರಿಗೆ ತರಲು ಎಲ್ಲರ ಒಮ್ಮತದ ಮೇರೆಗೆ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ADVERTISEMENT

ಔಷಧಿ ಅಂಗಡಿ, ಖಾಸಗಿ ಕ್ಲಿನಿಕ್, ಮದುವೆ ಕಾರ್ಯಗಳು ಹಾಗೂ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಈಗಾಗಲೇ ಘೋಷಣೆ ಆಗಿರುವಂತೆ ಭಾನುವಾರ ಪೂರ್ಣ ಜನತಾ ಕರ್ಫ್ಯೂ ಮುಂದುವರಿಯಲಿದೆ ಎಂದು ಹೇಳಿದರು.

ಈಗಾಗಲೇ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ತಾಲ್ಲೂಕಿಗೆ ಬಂದವರಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿ ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಮಾಸ್ಕ್ ಧರಿಸದೆ ಪಟ್ಟಣದಲ್ಲಿ ಹಾಗೂ ಅನವಶ್ಯಕವಾಗಿ ತಾಲ್ಲೂಕಿನ ಓಡಾಡುವವರಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಂಡ ಹಾಕಲಿದ್ದಾರೆ ಎಂದರು.

ಮುಂಬೈ ಮತ್ತು ಹೊರ ರಾಜ್ಯಗಳಿಂದ ತಾಲ್ಲೂಕಿಗೆ ಬರುವವರ ಸಂಖ್ಯೆ ತೀವ್ರಗೊಳ್ಳುತ್ತಿದ್ದು, ಇಂತಹವರ ಬಗ್ಗೆ ಸಂಬಂಧಪಟ್ಟ ಕುಟುಂಬದವರು ಹಾಗೂ ಅಕ್ಕಪಕ್ಕದ ಮನೆಯವರು ತಾಲ್ಲೂಕು ಆಡಳಿತ ಹಾಗೂ ಪೊಲೀಸರಿಗೆ ಮಾಹಿತಿ ನೀಡುವಂತೆ ಕ್ಷೇತ್ರದಾದ್ಯಂತ ಧ್ವನಿವರ್ಧಕದಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದರು.

ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ, ತಹಶೀಲ್ದಾರ್‌ಗಳಾದ ಆರ್.ನಯಿಂಉನ್ನೀಸಾ, ಪ್ರದೀಪ್ ಹಿರೇಮಠ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಎಪಿಎಂಸಿ ಅಧ್ಯಕ್ಷ ನರಸಿಂಹರಾಜು, ಪಿಎಸ್ಐ ಪ್ರೀತಂ, ವಿವಿಧ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.