ADVERTISEMENT

ತುಮಕೂರು ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು

26ಕ್ಕೆ ಏರಿದ ಸೋಂಕಿತರ ಸಂಖ್ಯೆ, ತಿಪಟೂರು ಗಾಂಧಿನಗರದಲ್ಲಿ ತೀವ್ರ ನಿಗಾ ವಲಯ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 24 ಮೇ 2020, 9:07 IST
Last Updated 24 ಮೇ 2020, 9:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯಲ್ಲಿ ಭಾನುವಾರ ಮತ್ತಿಬ್ಬರಿಗೆ ಕೋವಿಡ್‌–19 ದೃಢಪಟ್ಟಿದ್ದು, ಈ ಪೈಕಿ ಸೋಂಕಿತರ ಸಂಖ್ಯೆ 26ಕ್ಕೆ ಏರಿದೆ.

ಮೇ 5 ರಂದು ಗುಜರಾತ್‌ನಿಂದ ಬಂದಿದ್ದ 13 ಜನರ ಪೈಕಿ ಮೂವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಉಳಿದ 10 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ಹತ್ತು ಮಂದಿಯ 12 ದಿನದ ಮಾದರಿ ಪರೀಕ್ಷೆಯಲ್ಲಿ ಮತ್ತೊಬ್ಬರಿಗೆ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯನ್ನು ತುಮಕೂರು ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸೋಂಕು ದೃಢಪಟ್ಟ ಇನ್ನೊಬ್ಬರು ತಿಪಟೂರಿನ 50 ವರ್ಷದ ವ್ಯಕ್ತಿಯಾಗಿದ್ದು, ಇವರು ಇತ್ತೀಚೆಗೆ ಮಹರಾಷ್ಟ್ರದ ನಾಂದೇಡ್‌ನಿಂದ ಬಂದಿದ್ದರು. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾನುವಾರದ ಫಲಿತಾಂಶದಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ವ್ಯಕ್ತಿ ವಾಸವಾಗಿದ್ದ ತಿಪಟೂರಿನ ಗಾಂಧಿನಗರದಲ್ಲಿ ನಿರ್ಬಂಧಿತ ವಲಯವನ್ನಾಗಿ ಮಾಡಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದರು.

ADVERTISEMENT

ಶುಕ್ರವಾರ ಸೋಂಕು ದೃಢಪಟ್ಟಿದ್ದ ತುಮಕೂರು ಸದಾಶಿವನಗರದ ಗರ್ಭಿಣಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 5 ಮಂದಿಯನ್ನು ಗುರುತಿಸಲಾಗಿದ್ದು, ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಉಳಿದಂತೆ ತುಮಕೂರು ಗ್ರಾಮಾಂತರ ಹೆಬ್ಬೂರಿನ 66 ವರ್ಷದ ಪಿ–1685 ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 35 ಮಂದಿಯನ್ನು ಗುರುತಿಸಿ ಕ್ವಾರಂಟೈನ್‌ ಮಾಡಲಾಗಿದೆ.

26ಕ್ಕೆ ಏರಿಕೆ: ಬೆಂಗಳೂರು ಗ್ರಾಮಾಂತರ ದಾಬಸ್‌ಪೇಟೆಯ ಮಹಿಳೆ ಹೊರತುಪಡಿಸಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಐದು ಮಂದಿ ಗುಣಮುಖರಾಗಿದ್ದಾರೆ. 19 ಮಂದಿ ಸೋಂಕಿತರು ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ನೀಡಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ನಾಗರಿಕರು ಸಹಕರಿಸಬೇಕು. ಹೊರರಾಜ್ಯ ಹಾಗೂ ಕೆಂಪು ವಲಯದಿಂದ ಯಾರಾದರೂ ಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.