ADVERTISEMENT

ಎಲ್‌ಇಡಿ ದೀಪ ಅಳವಡಿಕೆಯಲ್ಲಿ ಭ್ರಷ್ಟಾಚಾರ

ಮಹಾನಗರ ಪಾಲಿಕೆ ಸದಸ್ಯ ಜೆ.ಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 5:36 IST
Last Updated 22 ನವೆಂಬರ್ 2020, 5:36 IST

ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪಾಲಿಕೆ ಸದಸ್ಯ ಜೆ.ಕುಮಾರ್ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಾಲಿಕೆ ವ್ಯಾಪ್ತಿಯ ಏಳೆಂಟು ವಾರ್ಡ್‌ಗಳಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಸಲಾಗಿದೆ. ಬೆಳಕಿನ ತೀವ್ರತೆ ಕಡಿಮೆ ಇದೆ. ಶೇ 60ರಷ್ಟು ಬೀದಿ ದೀಪಗಳಲ್ಲಿ ಬೆಳಕೇ ಬರುತ್ತಿಲ್ಲ. ಪೈಲೆಟ್ ಪ್ರಾಜೆಕ್ಟ್‌ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ನಿಯಮಗಳೆಲ್ಲವೂ ಉಲ್ಲಂಘನೆ ಆಗಿವೆ’ ಎಂದು ದೂರಿದರು.

ಒಪ್ಪಂದದ ಪ್ರಕಾರ ಸಿಸಿಎಂಎಸ್ ಯುನಿಟ್ ಹಾಕದೆ ಬೀದಿ ದೀಪಗಳನ್ನು ಬಿಚ್ಚುವಂತಿಲ್ಲ. ಆದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಬೇಕಾಬಿಟ್ಟಿಯಾಗಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಈ ಯೋಜನೆ ಪೂರ್ಣಗೊಂಡ ನಂತರ ಮುಂದಿನ ಏಳು ವರ್ಷಗಳಲ್ಲಿ ಪಾಲಿಕೆ ₹ 75 ಕೋಟಿಯನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ADVERTISEMENT

ಎಲ್ಇಡಿ ಅಳವಡಿಕೆ ಉದ್ದೇಶ ವಿದ್ಯುತ್ ಬಿಲ್ ಅನ್ನು ಉಳಿತಾಯ ಮಾಡುವುದಾಗಿದೆ. ಆದರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಅಂದಾಜು ಪಟ್ಟಿಗಿಂತ ಹೆಚ್ಚಿನ ಮೊತ್ತವನ್ನು ನಮೂದಿಸಿದ್ದಾರೆ. ₹ 46 ಲಕ್ಷ ಅನುದಾನ ದುರುಪಯೋಗವಾಗಿದೆ ಎಂದು ಸಂಸದರೇ ಹೇಳಿದ್ದಾರೆ. ಆದರೆ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್‌ಸಿಟಿ ಮತ್ತು ಪಾಲಿಕೆ ಸಹಯೋಗದಲ್ಲಿ ಎಲ್‌ಇಡಿ ಅಳವಡಿಕೆ ಯೋಜನೆ ರೂಪಿಸಲಾಗಿದೆ. ಸ್ಮಾರ್ಟ್‌ಸಿಟಿ ಟೆಂಡರ್ ಕರೆಯುವ ಜವಾಬ್ದಾರಿ ಮಾತ್ರ ಹೊಂದಿದೆ. ಪಾಲಿಕೆಯೇ ಹಣವನ್ನು ನೀಡುತ್ತಿದ್ದು, ಈ ಯೋಜನೆಯನ್ನು ರದ್ದುಗೊಳಿಸಿ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಬಲ್ಬ್‌ ಅಳವಡಿಸಿದರೆ ಪಾಲಿಕೆಗೆ ₹ 45 ಕೋಟಿ ಹಣ ಉಳಿತಾಯವಾಗಲಿದೆ
ಎಂದರು.

ಇದುವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಎಲ್‌ಇಡಿ ಬೀದಿ ದೀಪಗಳು ಪಾಲಿಕೆ ಆಸ್ತಿಯೇ ಹೊರತು ಸಿಎಂಸಿ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಒಡಂಬಡಿಕೆಯನ್ನು ಉಲ್ಲಂಘಿಸಿ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ, ಕೇಂದ್ರ ವಿಚಕ್ಷಣಾ ಇಲಾಖೆ, ಕೇಂದ್ರ ಸಚಿವರಿಗೆ ದಾಖಲೆ ಸಮೇತ ದೂರು ನೀಡಲಾಗುವುದು ಎಂದು ಹೇಳಿದರು.

ಸ್ಮಾರ್ಟ್‌ಸಿಟಿ ಅಧಿಕಾರಿಗಳು ಯೋಜನೆ ಕೈಗೊಳ್ಳದಿದ್ದರೆ ಅನುದಾನ ವಾಪಾಸ್ ಹೋಗುತ್ತದೆ ಎನ್ನುತ್ತಾರೆ. ಅನುದಾನ ವಾಪಾಸ್ ಹೋದರೆ ಸರ್ಕಾರಕ್ಕೆ ಹೋಗುತ್ತದೆ. ಸಾರ್ವಜನಿಕರ ಉಪಯೋಗಕ್ಕೆ ಬರುತ್ತದೆ. ಆದರೆ ಅಧಿಕಾರಿಗಳು ಕಾಟಾಚಾರಕ್ಕೆ ಯೋಜನೆ ರೂಪಿಸುತ್ತಿದ್ದಾರೆ ಎಂದು
ಕಿಡಿಕಾರಿದರು.

ಪಾಲಿಕೆ ಸದಸ್ಯರಾದ ಬಿ.ಎಸ್.ಮಂಜುನಾಥ್, ಶಿವರಾಂ, ಪ್ರಭಾವತಿ, ನಾಜಿಯಾಬೇಗಂ, ನೂರುನ್ನಿಸಾ ಭಾನು, ನಾಜೀಮಾ ಬಿ, ಮುಜೀಬಾ ಖಾನಂ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.