ADVERTISEMENT

ಹತ್ತಿ ಬೆಳೆ; ಸಂಕಷ್ಟದ ಹೊಳೆ

ಹೊಲಗಳು ಜಲಾವೃತ: ಇಳುವರಿ ಕುಸಿತದ ಆತಂಕ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 3:15 IST
Last Updated 20 ಸೆಪ್ಟೆಂಬರ್ 2022, 3:15 IST
ಜಲಾವೃತಗೊಂಡಿರುವ ಹತ್ತಿ ಹೊಲ
ಜಲಾವೃತಗೊಂಡಿರುವ ಹತ್ತಿ ಹೊಲ   

ವೈ.ಎನ್. ಹೊಸಕೋಟೆ: ಹಲವು ದಿನಗಳ ಹಿಂದೆ ಸುರಿದ ಮಳೆಯಿಂದ ಜಮೀನುಗಳಲ್ಲಿ ಬೆಳೆದಿರುವ ಹತ್ತಿ ಬೆಳೆ ಜಲಾವೃತಗೊಂಡಿದ್ದು, ಇಳುವರಿ ಕುಸಿತದ ಭೀತಿ ತಲೆದೋರಿದೆ.

ಶೇಂಗಾ, ಟೊಮೆಟೊ ಬೆಳೆ ರೈತರ ಕೈ ಹಿಡಿಯುತ್ತಿಲ್ಲ. ಶೇಂಗಾ ರೋಗ ಬಾಧೆಗೆ ತುತ್ತಾದರೆ, ಟೊಮೆಟೊ ಅದೃಷ್ಟದ ಬೆಳೆಯಾಗಿ ಮಾರ್ಪಟ್ಟಿದ್ದು, ಬೆರಳೆಣಿಕೆಯಷ್ಟು ರೈತರ ಕೈಹಿಡಿಯುತ್ತದೆ. ಉಳಿದ ಬಹುಪಾಲು ರೈತರು ನಷ್ಟ ಅನುಭವಿಸಿ ಟೊಮೆಟೊ ಬೆಳೆಯುವ ಸಹವಾಸದಿಂದ ದೂರು ಉಳಿದಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬಹಳಷ್ಟು ರೈತರು ಹತ್ತಿ ಬೆಳೆದಿದ್ದರು.

ಸಿದ್ದಾಪುರ, ವೈ.ಎನ್. ಹೊಸಕೋಟೆ, ಪೋತಗಾನಹಳ್ಳಿ, ಚಿಕ್ಕಹಳ್ಳಿ, ಜೋಡಿಅಚ್ಚಮ್ಮನಹಳ್ಳಿ ಮತ್ತು ರಂಗಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹೆಚ್ಚಾಗಿ ಹತ್ತಿ ಬೆಳೆಯಲಾಗಿದೆ. ಮೂರ್ನಾಲ್ಕು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಹತ್ತಿಯು ಈಗ ಕಟಾವು ಹಂತ ತಲುಪಿದೆ. ಈ ಮಧ್ಯೆ ಸತತವಾಗಿ ಸುರಿದ ಮಳೆಯಿಂದ ಬಹುಭಾಗ ಹತ್ತಿ ಬೆಳೆದಿರುವ ಜಮೀನುಗಳಲ್ಲಿ ನೀರು ನಿಂತಿದೆ.

ADVERTISEMENT

‘ಗಿಡ ಕೊಳೆತು ಹತ್ತಿಯ ಕಾಯಿಗಳಲ್ಲಿ ಹತ್ತಿ ಒಡೆಯುತ್ತಿಲ್ಲ. ಹಳದಿ ರೋಗದಿಂದ ಎಲೆ ಮತ್ತು ಕಾಯಿ ಮುದುಡುತ್ತಿವೆ. ಎಳೆಯ ಹಂತದಲ್ಲೇ ಕಾಯಿ ಕಪ್ಪುವರ್ಣಕ್ಕೆ ತಿರುಗಿ ಒಣಗುತ್ತಿವೆ. ಹೂವು ಮುದುಡುತ್ತಾ ಕಾಯಿ ಬಿಡದೆ ಉದುರುತ್ತಿದೆ. ಪ್ರತಿ ಗಿಡದಲ್ಲಿ ಕಾಯಿಗಳು ಮೂಡುವುದು ಗಣನೀಯವಾಗಿ ಕಡಿಮೆಯಾಗಿದ್ದು, ಇಳುವರಿ ಕಡಿಮೆಯಾಗಿ ರೈತರು ನಷ್ಟಕ್ಕೆ ಸಿಲುಕಿದ್ದೇವೆ’ ಎನ್ನುತ್ತಾರೆ ಜಾಲೋಡು ಗ್ರಾಮದ ರೈತರಾದ ಈರಣ್ಣ, ಈರಭದ್ರಪ್ಪ ಮತ್ತು ಪರಮೇಶ.

‘ಈಗ ಎಲ್ಲೆಡೆ ಹತ್ತಿ ಬೆಳೆಯುತ್ತಿದ್ದು, ಹತ್ತಿ ಬಿಡಿಸಲು ಕೂಲಿ ಕಾರ್ಮಿಕರು ಅನಿವಾರ್ಯವಾಗಿದೆ. ಆದರೆ, ಬಹುಪಾಲು ಗ್ರಾಮೀಣ ಪ್ರದೇಶದ ಜನರು ಬೆಂಗಳೂರಿಗೆ ಉದ್ಯೋಗಕ್ಕಾಗಿ ವಲಸೆ ಹೋಗಿದ್ದು, ಕೃಷಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಒಂದೆರಡು ದಿನಗಳಲ್ಲಿ ಮುಗಿಸಬಹುದಾದ ಕೆಲಸ ಹತ್ತಾರು ದಿನಗಳವರೆಗೆ ಹಿಡಿಯುತ್ತಿದೆ’ ಎಂದು ಗೌಡತಿಮ್ಮನಹಳ್ಳಿಯ ರೈತ ಹನುಮಂತರಾಯ ತಿಳಿಸಿದರು.

‘ಹಿಂದಿನ ವರ್ಷ ಒಂದು ಕ್ವಿಂಟಲ್ ಹತ್ತಿಗೆ ₹ 10 ಸಾವಿರದಿಂದ ₹ 15 ಸಾವಿರ ಬೆಲೆ ಇತ್ತು. ಈ ವರ್ಷ ಅರ್ಧದಷ್ಟು ಬೆಲೆ ಕಡಿಮೆಯಾಗಿದೆ. ಸತತ ಮಳೆಯಿಂದ ಇಳುವರಿಯೂ ಕಡಿಮೆಯಾಗಿದೆ. ಬೆಳೆಗೆ ಸ್ಥಳೀಯ ಮಾರುಕಟ್ಟೆ ಇಲ್ಲದೆ ದೂರದ ಬಳ್ಳಾರಿ ಅಥವಾ ಚಿತ್ರದುರ್ಗಕ್ಕೆ ಕೊಂಡೊಯ್ದು ಮಾರಾಟ ಮಾಡಬೇಕಾಗಿದೆ. ಬಿತ್ತನೆಯಿಂದ ಮಾರಾಟದವರೆಗೆ ರೈತರಿಗೆ ಸಮಸ್ಯೆ ತಪ್ಪುತ್ತಿಲ್ಲ. ಸ್ಥಳೀಯವಾಗಿ ಬೀಜ ಖರೀದಿಸಿದರೆ ಉತ್ತಮ ಇಳುವರಿ ಸಿಗುತ್ತಿಲ್ಲ. ಮಂಡಿಗಳಲ್ಲಿ ಬೀಜ ಕೊಂಡು ಮತ್ತೆ ಅವರಿಗೆ ಹತ್ತಿ ಮಾರುವುದು ಅನಿವಾರ್ಯವಾಗಿದೆ. ಅಲ್ಲಿಯೂ ಸಾಲ ಪಡೆದರೆ ಬಡ್ದಿ ಪಾವತಿಸಬೇಕಾಗಿದೆ’ ಎಂದು ವೈ.ಎನ್‌. ಹೊಸಕೋಟೆ ರೈತ ಬಲರಾಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.