ADVERTISEMENT

ಸಮುದಾಯಕ್ಕೂ ತಟ್ಟಿದ ಸೋಂಕು

ಜಿಲ್ಲೆಯಲ್ಲಿ 44 ಮಂದಿಗೆ ಕೊರೊನಾ ಸೋಂಕು, ಒಟ್ಟು ಸಂಖ್ಯೆ 183ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 16:47 IST
Last Updated 2 ಜುಲೈ 2020, 16:47 IST
ತುಮಕೂರಿನ ಎಂ.ಜಿ.ರಸ್ತೆಯಲ್ಲಿ ಚಿನ್ನಾಭರಣ ಮತ್ತು ಗಿರವಿ ಅಂಗಡಿಗಳು ಬಾಗಿಲು ಮುಚ್ಚಿರುವುದು
ತುಮಕೂರಿನ ಎಂ.ಜಿ.ರಸ್ತೆಯಲ್ಲಿ ಚಿನ್ನಾಭರಣ ಮತ್ತು ಗಿರವಿ ಅಂಗಡಿಗಳು ಬಾಗಿಲು ಮುಚ್ಚಿರುವುದು   

ತುಮಕೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದೆ. ಗುರುವಾರ ಒಂದೇ ದಿನ 44 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 183ಕ್ಕೆ ಏರಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇಡೀ ಜಿಲ್ಲೆಯ ಎಲ್ಲೆಡೆ ಕೊರೊನಾ ವ್ಯಾಪಿಸಿದೆ. ಗ್ರಾಮೀಣ ಪ್ರದೇಶಗಳಿಗೆ ಈಗಾಗಲೇ ಕಾಲಿಟ್ಟಿದ್ದು ಮತ್ತಷ್ಟು ಪಸರಿಸುವ ಸಾಧ್ಯತೆ ದಟ್ಟವಾಗಿದೆ.

ಗುರುವಾರ ಕೊರಟಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 17 ಮಂದಿ ಸೋಂಕಿಗೆ ಸಿಲುಕಿದ್ದಾರೆ. 127 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ತುಮಕೂರು ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ತುರುವೇಕೆರೆಯಲ್ಲಿ ಇಲ್ಲಿಯವರೆಗೆ ಒಟ್ಟು 5 ಮಂದಿಗೆ ಸೋಂಕು ತಗುಲುವ ಮೂಲಕ ಕಡಿಮೆ ಪ್ರಮಾಣದಲ್ಲಿ ಕೊರೊನಾ ಕಾಣಿಸಿಕೊಂಡ ತಾಲ್ಲೂಕು ಎನಿಸಿದೆ.

ADVERTISEMENT

ಅಕ್ಷಯ ಆಸ್ಪತ್ರೆ ಸೀಲ್‌ಡೌನ್:

ಅಶೋಕ ನಗರದ ಅಕ್ಷಯ ಆಸ್ಪತ್ರೆಯ ‘ಡಿ’ ದರ್ಜೆ ನೌಕರ ಹಾಗೂ ಶುಶ್ರೂಷಕಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಬೆಳಿಗ್ಗೆಯೇ ಮಹಾನಗರ ಪಾಲಿಕೆ ಅಧಿಕಾರಿಗಳು ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿದರು. ಸುತ್ತಮುತ್ತಲ ಮನೆಗಳು ಹಾಗೂ ಆಸ್ಪತ್ರೆಯನ್ನು ಸ್ಯಾನಿಟೈಸ್‌ಗೆ ಒಳಪಡಿಸಿದರು.

ಚಿನ್ನಾಭರಣ ಅಂಗಡಿಗಳು ಬಂದ್:

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 7ರ ವರೆಗೆ ಗಿರವಿ ಮತ್ತು ಚಿನ್ನಾಭರಣ ಅಂಗಡಿಗಳು ಬಂದ್ ಆಗಿವೆ. ವ್ಯಾಪಾರ ವಹಿವಾಟು ನಿಲ್ಲಿಸಲಾಗಿದೆ. ಗ್ರಾಹಕರು ಸಹಕರಿಸಬೇಕು. ಇದು ಸ್ವಯಂ ಲಾಕ್‌ಡೌನ್ ಎಂದು ಅಂಗಡಿಗಳ ಮುಂದೆ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ನಗರದಲ್ಲಿ ಗುರುವಾರ ಬಹುತೇಕ ಚಿನ್ನಾಭರಣ ಅಂಗಡಿಗಳು ಬಾಗಿಲು ಮುಚ್ಚಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.