ADVERTISEMENT

ಕೋವಿಡ್ ನಿಯಂತ್ರಣ ವಿಫಲ: ಪಿಡಿಒ ವಿರುದ್ಧ ಶಾಸಕ ಗರಂ

ಕಾರ್ಯಪಡೆ ಸಭೆಯಲ್ಲಿ ಡಾ.ರಂಗನಾಥ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 26 ಮೇ 2021, 3:19 IST
Last Updated 26 ಮೇ 2021, 3:19 IST
ಕುಣಿಗಲ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು
ಕುಣಿಗಲ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು   

ಕುಣಿಗಲ್: ‘ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್‌ ಹೆಚ್ಚುತ್ತಿದ್ದು, ಸೋಂಕು ಹರಡುವುದನ್ನು ತಡೆಯಲು ಗ್ರಾಮಪಂಚಾಯಿತಿ ಪಿಡಿಒ ಸಹಕರಿಸುತ್ತಿಲ್ಲ, ಬಿಲ್ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ’ ಎಂದು ಶಾಸಕ ಡಾ.ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್ ನಿಯಂತ್ರಣ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನ 36 ಗ್ರಾಮಪಂಚಾಯಿತಿಗಳಲ್ಲಿ 4 ಸಾವಿರ ಸೋಂಕಿತರು ಇದ್ದಾರೆ. 200 ಮಂದಿ ಮೃತರಾಗಿದ್ದಾರೆ. ಯಾವುದೇ ಪಿಡಿಒ ಆಗಲಿ, ಸಿಬ್ಬಂದಿಯಾಗಲಿ, ಸೋಂಕಿತರನ್ನು ಭೇಟಿ ಮಾಡಿ ಸ್ಥೈರ್ಯ ತುಂಬಿಲ್ಲ ಎಂದರು.

ADVERTISEMENT

ಪರಿಸ್ಥಿತಿ ಗಂಭೀರವಾಗುತ್ತಿದ್ದೆ. ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಕೋವಿಡ್ ಕೇರ್‌ ಸೆಂಟರ್‌ಗಳಿಗೆ ದಾಖಲಿಸಲು ಹಾಗೂ ವಲಸಿಗರನ್ನು ತಡೆಯಲು ಸೂಚಿಸಿದರು.

ತಾಲ್ಲೂಕಿನಲ್ಲಿ 850 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅವರಿಗೂ ಪಡಿತರ ವಿತರಣೆಗೆ ಕ್ರಮಕೈಗೊಳ್ಳಲು ಸೂಚಿಸಿದರು.

ಕೋವಿಡ್‌ ನಿಯಂತ್ರಣಕ್ಕೆ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳು ಕಚೇರಿ ಬಿಟ್ಟು ಗ್ರಾಮೀಣ ಪ್ರದೇಶಕ್ಕೆ ತೆರಳಿ ವಿಶೇಷ ಕಾರ್ಯತಂತ್ರ ರೂಪಿಸಿ ಸೋಂಕು ಮುಕ್ತಾ ಗ್ರಾಮಗಳ ನಿರ್ಮಾಣಕ್ಕೆ ಶ್ರಮಿಸಬೇಕು. ತಾಲ್ಲೂಕಿನಲ್ಲಿ ಈಗಾಗಲೇ 7 ಮಂದಿಗೆ ಮ್ಯೂಕರ್ ಮೈಕೊಸಿಸ್‌ ತಗುಲಿದ್ದು , ಇಬ್ಬರು ಮೃತಪಟ್ಟಿದ್ದಾರೆ. ಸೋಂಕಿನ ಲಕ್ಷಣಗಳನ್ನು ಪತ್ತೆಹಚ್ಚಿ, ಗಮನಕ್ಕೆ ತಂದು ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಅಧಿಕಾರಿಗಳು ನೆರವು ನೀಡಬೇಕು ಎಂದರು.

ಡಿವೈಎಸ್‌ಪಿ ರಮೇಶ್ ಮಾತನಾಡಿ, ರೈತರ ಖಾತೆಗಳಿಗೆ ರಾಗಿ ಮತ್ತು ಕಿಸಾನ್ ಸಮ್ಮಾನ್ ಹಣ ಬಿಡುಗಡೆಯಾಗಿದೆ. ಡಿಸಿಸಿ ಬ್ಯಾಂಕ್, ಪಡಿತರ ವಿತರಣಾ ಕೇಂದ್ರಗಳ ಮುಂದೆ ಜನ ಜಮಾವಣೆಯಾಗುತ್ತಿದ್ದಾರೆ. ಈ ಸ್ಥಳಗಳಲ್ಲಿ ಸೋಂಕು ಹರಡುವ ಸಾಧ್ಯತೆ ಇದ್ದು, ಬ್ಯಾಂಕ್ ಸಮಯ ಬದಲಾವಣೆ ಮಾಡುವಂತೆ ಮತ್ತು ಪಡಿತರ ವಿತರಣಾ ಕೇಂದ್ರಗಳ ಟೋಕನ್ ಪದ್ಧತಿ ಜಾರಿಗೆ ತರುವಂತೆ ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದ ಜನ ರೋಗದ ಲಕ್ಷಣ ಕಂಡು ಬಂದ ತಕ್ಷಣ ಮೆಡಿಕಲ್‌ಗಳಿಗೆ ತೆರಳಿ ಔಷಧಿ ಪಡೆಯುತ್ತಿದ್ದಾರೆ. ವೈದ್ಯರ ಚೀಟಿ ಇಲ್ಲದೆ ಔಷಧಿ ನೀಡದಂತೆ ಮಾಲೀಕರಿಗೆ ಸೂಚನೆ ನೀಡುವಂತೆ ತಿಳಿಸಿದರು.

ಜ್ವರದ ಪ್ರಕರಣಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿ. ವರದಿ ನಂತರ ಚಿಕಿತ್ಸೆಗೆ ಗಮನ ಹರಿಸುವಂತೆ ಸ್ಥಳೀಯ ವೈದ್ಯರು ಸಭೆ ನಡೆಸಿ ಸೂಚನೆ ನೀಡುವಂತೆ ತಹಶೀಲ್ದಾರ್ ಮಹಾಬಲೇಶ್ವರ್ ಮತ್ತು ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್ ಅವರಿಗೆ ಶಾಸಕರು ಸಲಹೆ ನೀಡಿದರು ..

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ರಮೇಶ್, ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್, ಸಿಪಿಐ ಗುರುಪ್ರಸಾಧ್‌, ಡಿ.ಎಲ್.ರಾಜು, ಪುರಸಭೆ ಅಧ್ಯಕ್ಷ ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.