ತುಮಕೂರು: ಪ್ರತಿಭಟನೆ, ಧರಣಿ, ಸಭೆ ನಡೆಸುವ ಮುನ್ನ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಕಿಡಿಕಾರಿದೆ.
‘ಅನ್ಯಾಯದ ವಿರುದ್ಧ, ಹಕ್ಕುಗಳ ರಕ್ಷಣೆಗಾಗಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಜಿಲ್ಲಾಧಿಕಾರಿ ಸಭೆ, ಸಮಾರಂಭ, ಪ್ರತಿಭಟನೆ ನಡೆಸಲು ವಿದ್ಯುತ್, ಧ್ವನಿವರ್ಧಕ ಬಳಕೆ ಮುಂತಾದವುಗಳಿಗೆ ಸಕ್ಷಮ ಎಲ್ಲ ಪ್ರಾಧಿಕಾರ, ಪೊಲೀಸ್ ಅನುಮತಿ ಪಡೆಯಬೇಕು ಎಂದು ಆದೇಶಿಸಿದ್ದಾರೆ. ಇದು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ನಗರ ಕಾರ್ಯದರ್ಶಿ ಎ.ಲೋಕೇಶ್ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿ ಅಧಿಕಾರಶಾಹಿ ಧೋರಣೆ ಅನುಸರಿಸಿದ್ದಾರೆ. ಕೂಡಲೇ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಪ್ರಗತಿಪರ ಸಂಘಟನೆಗಳ ಜೊತೆ ಚರ್ಚಿಸಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.