ADVERTISEMENT

ಸಹಕಾರ ಸಂಘ ರಚಿಸಿಕೊಂಡು ಉತ್ಪನ್ನಕ್ಕೆ ಲಾಭ ಪಡೆಯಿರಿ

ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದಿಂದ ಆಯೋಜಿಸಿದ್ಧ ನೇಕಾರರ ದಿನಾಚರಣೆಯಲ್ಲಿ ಶಾಸಕ ಜ್ಯೋತಿಗಣೇಶ್ ನೇಕಾರರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:39 IST
Last Updated 7 ಆಗಸ್ಟ್ 2019, 19:39 IST
ನೇಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು. ಗಿರಿಜಾ ಧನಿಯಾಕುಮಾರ್, ರಾಮಕೃಷ್ಣಪ್ಪ, ಶ್ರೀಧರ್, ಮಲ್ಲಿಕಾರ್ಜುನ್, ಧನಿಯಾಕುಮಾರ್ ಇದ್ದರು
ನೇಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು. ಗಿರಿಜಾ ಧನಿಯಾಕುಮಾರ್, ರಾಮಕೃಷ್ಣಪ್ಪ, ಶ್ರೀಧರ್, ಮಲ್ಲಿಕಾರ್ಜುನ್, ಧನಿಯಾಕುಮಾರ್ ಇದ್ದರು   

ತುಮಕೂರು: ‘ನೇಕಾರರು ಸಹಕಾರ ಸಂಘಗಳನ್ನು (ಸೊಸೈಟಿ) ರಚಿಸಿಕೊಳ್ಳಬೇಕು. ತಾವು ಉತ್ಪಾಧಿಸುವ ಉತ್ಪನ್ನಗಳನ್ನು ಆ ಮೂಲಕ ವ್ಯಾಪಾರ, ವಹಿವಾಟು ನಡೆಸಬೇಕು’ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

ಬುಧವಾರ ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದವತಿಯಿಂದ ಆಯೋಜಿಸಿದ್ದ ನೇಕಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಆನಾದಿಕಾಲದಿಂದಲೂ ಕುಲಕಸುಬನ್ನೇ ನಂಬಿ ನೇಕಾರರು ಬದುಕು ನಡೆಸಿಕೊಂಡು ಬಂದಿದ್ದಾರೆ. ಇವರು ಉತ್ಪಾದಿಸುವ ಉತನ್ನಗಳಿಂದ ಮಾರಾಟಗಾರರಿಗೆ ಹೆಚ್ಚು ಲಾಭ ಲಭಿಸುತ್ತಿದೆ. ಉತ್ಪಾದಕರಿಗೂ ಹೆಚ್ಚಿನ ಲಾಭ ಬರಬೇಕೆಂದರೆ ಸಹಕಾರ ಸಂಘಗಳನ್ನು ರಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅತಿ ಹಿಂದುಳಿದಿರುವ ನೇಕಾರ ಸಮುದಾಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುತಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರವಹಿಸಿಕೊಂಡ ಕೆಲವೇ ಹೊತ್ತಿನಲ್ಲಿ ನೇಕಾರರ ₹ 100 ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದರು.

’ಕ್ಯಾತ್ಸಂದ್ರದಲ್ಲಿ ವಸತಿ ನಿಲಯ ಮತ್ತು ಸಮುದಾಯ ಭವನಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 5 ಲಕ್ಷ ನೀಡಲಾಗಿದೆ. ಇನ್ನೂ ₹ 5 ಲಕ್ಷ ನೀಡಲಾಗುವುದು’ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಗಂಗಪ್ಪ ಮಾತನಾಡಿ,‘ ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ನೇಕಾರ ಸಮುದಾಯವನ್ನು ಗುರುತಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಮುದಾಯ ಗುರುತಿಸಿ ಗೌರವಿಸಿದ್ದಾರೆ’ ಎಂದರು.

ಕನ್ನಡ ಸೇನೆಯ ಜಿಲ್ಲಾ ಘಟಕ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ,‘ ಹೊಟ್ಟೆಗೆ ಅನ್ನ ನೀಡುವ ರೈತರು ಎಷ್ಟು ಮುಖ್ಯವೊ ಮಾನ ಮುಚ್ಚಲು ಬಟ್ಟೆ ನೇಯುವ ನೇಕಾರರು ಅಷ್ಟೇ ಮುಖ್ಯ’ ಎಂದರು.

’ರೈತರು ಸಂಕಷ್ಟಕ್ಕೆ ಒಳಗಾದರೆ ಅವರ ನೇರವಿಗೆ ಅನೇಕ ಕಾನೂನುಗಳಿವೆ. ಆದರೆ, ನೇಕಾರರ ಹಿತ ಕಾಯಲು ಯಾವುದೇ ಕಾನೂನುಗಳಿಲ್ಲ. ಆದರೂ ರಾಷ್ಟ್ರಮಟ್ಟ ಮತ್ತು ರಾಜ್ಯಮಟ್ಟದಲ್ಲಿ ನಮ್ಮನ್ನು ಗುರುತಿಸಿ, ನಮ್ಮ ಕಷ್ಟ ಸುಖಃಗಳಿಗೆ ಸ್ಪಂದಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ’ ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಾಕುಮಾರ್, 26ನೇ ವಾರ್ಡಿನ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿದರು.

ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ನೇಕಾರರಿಗೆ ಉಚಿತ ವಿದ್ಯುತ್, ಮನೆಗಳ ನಿರ್ಮಾಣ, ಆರೋಗ್ಯ ವಿಮೆಯಂತಹ ಯೋಜನೆಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರವೂ ಅದೇ ರೀತಿಯಲ್ಲಿ ನೇಕಾರರ ನೆರವು ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

ರವೀಂದ್ರಕುಮಾರ್, ಕುರುಹಿನಶೆಟ್ಟಿ ಸಮುದಾಯದ ಶಿವಾನಂದಪ್ಪ, ನೇಕಾರರ ಒಕ್ಕೂಟದ ಗೌರವ ಅಧ್ಯಕ್ಷ ರಾಮಕೃಷ್ಣಪ್ಪ, ಪದ್ಮಶಾಲಿ ಸಮಾಜದ ಶ್ರೀಧರ್, ಅನಿಲ್, ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.