ADVERTISEMENT

ಪಾಲಿಕೆ ಸದಸ್ಯ ರವಿಕುಮಾರ್ ಕೊಲೆ: ಸುಜಯ್‌ಗೆ ಬೆಂಗಳೂರು, ಮಂಡ್ಯ ರೌಡಿಗಳ ಸಾಥ್

9 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 12:06 IST
Last Updated 15 ಅಕ್ಟೋಬರ್ 2018, 12:06 IST
ದಿವ್ಯಾ ಗೋಪಿನಾಥ್
ದಿವ್ಯಾ ಗೋಪಿನಾಥ್   

ತುಮಕೂರು: ಮಹಾನಗರ ಪಾಲಿಕೆ ಸದಸ್ಯ ರವಿಕುಮಾರ್ ಕೊಲೆ ಪ್ರಕರಣದ ಸಂಬಂಧ ಈಗಾಗಲೇ 9 ಆರೋಪಿಗಳನ್ನು ಬಂಧಿಸಿದ್ದೇವೆ. ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಮಾಹಿತಿ ನೀಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಮುಖ ಆರೋಪಿ ಕರುನಾಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸುಜಯ್ ಭಾರ್ಗವ್, ರಘು, ರಾಜೇಶ್, ನವೀನ್, ಕೆ.ಎಲ್.ದೇವರಾಜ, ರಘು, ಜೋಮನ್ ವಿ.ಜಾರ್ಜ್, ಜಗದೀಶ್, ವಿ.ಎನ್.ಮಹೇಶ್ ಬಂಧಿತರು. ಮತ್ತೊಬ್ಬ ಆರೋಪಿ ಸುನೀಲ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ’ ಎಂದರು.

ರವಿ ಕುಮಾರ್ ಅಂಗಡಿಯ ಬಳಿ ಟೀ ಕುಡಿಯುತ್ತಿದ್ದಾಗ ಅಲ್ಲಿಗೆ 407 ವಾಹನದಲ್ಲಿ ಎಂಟು ಮಂದಿ ಬಂದಿದ್ದಾರೆ. ಮೊದಲು ಚಾಲಕ ಇಳಿದು ಅಂಗಡಿ ಬಳಿ ಬಂದಿದ್ದಾನೆ. ಸಿಗರೇಟ್ ಕೊಡುವಂತೆ ಕೇಳಿದ್ದಾನೆ. ರವಿಕುಮಾರ್ ಕಣ್ಣಿಗೆ ಕಾರದ ಪುಡಿ ಎರಚಿದ್ದಾನೆ. ವಾಹನದಲ್ಲಿದ್ದ ಉಳಿದ 7 ಮಂದಿ ಬಂದು ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ನಂತರ ಹನುಮಂತಪುರದ ಬಳಿ ವಾಹನವನ್ನು ಬಿಟ್ಟು ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ವಿವರಿಸಿದರು.

ADVERTISEMENT

ಎಂಟು ಮಂದಿಯಲ್ಲಿ ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದೆ. ರವಿಕುಮಾರ್ ಚಲನವಲನದ ಬಗ್ಗೆ ಸುಜಯ್‌ಗೆ ಇಬ್ಬರು ಮಾಹಿತಿ ಕೊಡುತ್ತಿದ್ದರು. ಅಲ್ಲದೆ ದಾಳಿಗೆ ಲಾಂಗ್ ಕೊಟ್ಟವರು, ಪರಾರಿಯಾಗಲು ನೆರವಾದವರು ಹೀಗೆ ಹಲವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಮತ್ತಷ್ಟು ಮಂದಿಯನ್ನು ಬಂಧಿಸಲಾಗುವುದು ಎಂದು ವಿವರಿಸಿದರು.

ಹತ್ಯೆಗೆ ತುಮಕೂರಿನಲ್ಲಿ ಹುಡುಗರು ಸಿಕ್ಕಿಲ್ಲ. ಆಗ ಮಂಡ್ಯದ ರೌಡಿ ಶೀಟರ್‌ಗಳಾದ ಜಗದೀಶ್, ಮಹೇಶ್ ಹಾಗೂ ಬೆಂಗಳೂರಿನ ರೌಡಿ ಶೀಟರ್‌ಗಳಾದ ರಘು ಮತ್ತು ಜೋಮನ್ ವಿ.ಜಾರ್ಜ್‌ನನ್ನು ರಾಜೇಶ್ ಕರೆತಂದಿದ್ದಾನೆ. ಎಲ್ಲರೂ ಕೂಡಿ ಹತ್ಯೆಗೆ ಯೋಜನೆ ರೂಪಿಸಿದ್ದಾರೆ ಎಂದು ಮಾಹಿತಿ ನೀಡಿದರು.

407 ವಾಹನವನ್ನು ನಗರದ ವ್ಯಕ್ತಿಯೊಬ್ಬರಿಂದ ಬಾಡಿಗೆಗೆ ತಂದಿದ್ದಾರೆ. ಇವರು ಈ ದುಷ್ಕೃತ್ಯಕ್ಕೆ ವಾಹನ ಕೇಳುತ್ತಿದ್ದಾರೆ ಎನ್ನುವುದು ವಾಹನ ಮಾಲೀಕರಿಗೆ ತಿಳಿದಿಲ್ಲ ಎಂದರು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಇದ್ದರು.

ಆರೋಪಿಗಳ ಪತ್ತೆಗೆ ಪೊಲೀಸರು ಡಿವೈಎಸ್‌ಪಿ ಚಂದ್ರಶೇಖರ್ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಇದರಲ್ಲಿ ಒಟ್ಟು 25 ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.