ADVERTISEMENT

ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಅಸ್ಥಿ ಪಂಜರ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 2:54 IST
Last Updated 12 ಜೂನ್ 2019, 2:54 IST
ಮಡಕಶಿರಾ ತಾಲೂಕಿನ ಗುಡಿಬಂಡೆ ಮಂಡಲ್ ವ್ಯಾಪ್ತಿಯ ಚಿಕ್ಕತಿರ್ಪಿ ಗ್ರಾಮದ ಜಮೀನಿನಲ್ಲಿ ಹೂತು ಹಾಕಿದ್ದ ಲಕ್ಷ್ಮೀದೇವಿ ಶವ ಹೊರಗಡೆ ತೆಗೆಯುತ್ತಿರುವ ಪೊಲೀಸರು
ಮಡಕಶಿರಾ ತಾಲೂಕಿನ ಗುಡಿಬಂಡೆ ಮಂಡಲ್ ವ್ಯಾಪ್ತಿಯ ಚಿಕ್ಕತಿರ್ಪಿ ಗ್ರಾಮದ ಜಮೀನಿನಲ್ಲಿ ಹೂತು ಹಾಕಿದ್ದ ಲಕ್ಷ್ಮೀದೇವಿ ಶವ ಹೊರಗಡೆ ತೆಗೆಯುತ್ತಿರುವ ಪೊಲೀಸರು   

ಶಿರಾ: ತಾಲ್ಲೂಕಿನ ಬೆಜ್ಜಿಹಳ್ಳಿ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ನಾಪತ್ತೆಯಾಗಿದ್ದ ಲಕ್ಷ್ಮೀದೇವಿ (45) ಎಂಬುವವರ ಅಸ್ಥಿ ಪಂಜರವನ್ನು ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಗುಡಿಬಂಡೆ ಮಂಡಲ್ ವ್ಯಾಪ್ತಿಯ ಚಿಕ್ಕತಿರ್ಪಿ ಗ್ರಾಮದಲ್ಲಿ ಪೊಲೀಸರು ಮಂಗಳವಾರ ಹೊರೆ ತೆಗೆದಿದ್ದಾರೆ.

ಲಕ್ಷ್ಮೀದೇವಿ 2017ರಲ್ಲಿ ಕಾಣೆಯಾಗಿದ್ದರು. ಈ ಬಗ್ಗೆ ಅವರ ಪುತ್ರ ಪಟ್ಟನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಚಿಕ್ಕತಿರ್ಪಿ ಗ್ರಾಮದಲ್ಲಿ ಸಂಬಂಧಿಕರು ಹಣ ಕೊಡಬೇಕು. ಪಡೆದು ಬರುತ್ತೇನೆ ಎಂದು ಹೋದ ತಾಯಿ ಮನೆಗೆ ಹಿಂದಿರುಗಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಎರಡು ವರ್ಷವಾದರೂ ತಾಯಿಯ ಬಗ್ಗೆ ಯಾವುದೇ ಮಾಹಿತಿ ದೊರೆಯದ ಕಾರಣ ಮಗ ರವಿ ಚಿಕ್ಕತಿರ್ಪಿ ಗ್ರಾಮಕ್ಕೆ ಹೋಗಿ ವಿಚಾರಿಸಿದ್ದಾರೆ. ಆಗ ಲಕ್ಷ್ಮೀದೇವಿ ಅವರು ಈರಣ್ಣ ಎಂಬುವವರ ಜೊತೆ ಇದ್ದ ಬಗ್ಗೆ ಮಾಹಿತಿ ಸಿಕ್ಕಿದೆ.

ADVERTISEMENT

ಮಾಹಿತಿ ಪಡೆದ ರವಿ ಮತ್ತೆ ಪೊಲೀಸರಿಗೆ ಮರುದೂರು ನೀಡಿ ನನ್ನ ತಾಯಿಯನ್ನು ಈರಣ್ಣ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ, ಡಿವೈಎಸ್‌ಪಿ ವೆಂಕಟಸ್ವಾಮಿ, ಶಿರಾ ಗ್ರಾಮಾಂತರ ಸಿಪಿಐ ಶಿವಕುಮಾರ್ ಮಾರ್ಗದರ್ಶನದಲ್ಲಿ ತನಿಖೆ ಮುಂದಾದ ಪಿಎಸ್‌ಐ ವಿ.ನಿರ್ಮಲಾ ಅವರು ಈರಣ್ಣನ ಇಬ್ಬರು ಸ್ನೇಹಿತರ ಮೂಲಕ ಪ್ರಕರಣ ಪತ್ತೆ ಮಾಡಿದ್ದಾರೆ.

ಲಕ್ಷ್ಮೀದೇವಮ್ಮ ಅವರ ಬಳಿ ಈರಣ್ಣ ಇದ್ದರು. ಗಲಾಟೆಯಾಗಿ ಲಕ್ಷ್ಮೀದೇವಿಯನ್ನು ಕೊಲೆ ಮಾಡಿ ಈ ಜಾಗದಲ್ಲಿ ಮಣ್ಣು ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಹೇಳಿಕೆ ಆಧಾರದ ಮೇಲೆ ಆಂಧ್ರಪ್ರದೇಶದ ಪೊಲೀಸರ ಅನುಮತಿ ಪಡೆದು ಅನುಮಾನಾಸ್ಪದ ಜಾಗದಲ್ಲಿ ಅಗೆದಾಗ ಲಕ್ಷ್ಮೀದೇವಿ ಶವ ಪತ್ತೆಯಾಗಿದೆ. ತನ್ನ ತಾಯಿಯ ಬಟ್ಟೆಯನ್ನು ರವಿ ಗುರ್ತಿಸಿದ್ದಾರೆ. ಶವವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೊಲೆ ಮಾಡಿದ್ದಾನೆ ಎನ್ನಲಾದ ಆರೋಪಿ ಈರಣ್ಣ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ. ತನಿಖೆಯಲ್ಲಿ ಸಿಬ್ಬಂದಿ ಶ್ರೀನಿವಾಸ್, ಹನುಮಂತಚಾರ್, ಸಿದ್ರಾಮ್, ಶಿವಕುಮಾರ್, ಯಶೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.