ADVERTISEMENT

ಕಾಂಗ್ರೆಸ್‌ನಿಂದ ಪರಿಶಿಷ್ಟರ ಓಲೈಕೆ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 6:34 IST
Last Updated 1 ಏಪ್ರಿಲ್ 2024, 6:34 IST
ವೈ.ಎಚ್.ಹುಚ್ಚಯ್ಯ
ವೈ.ಎಚ್.ಹುಚ್ಚಯ್ಯ   

ತುಮಕೂರು: ಪರಿಶಿಷ್ಟ ಸಮುದಾಯವನ್ನು ಕಾಂಗ್ರೆಸ್‌ ಮತ ಬ್ಯಾಂಕ್‌ ಮಾಡಿಕೊಂಡಿದೆ. ಆರ್ಥಿಕ, ಔದ್ಯೋಗಿಕ,‌ ಸಾಮಾಜಿಕವಾಗಿ ಅವರನ್ನು ಸಶಕ್ತರನ್ನಾಗಿ ಮಾಡುತ್ತಿಲ್ಲ ಎಂದು ಬಿಜೆಪಿ‌ ಜಿಲ್ಲಾ ಘಟಕದ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಇಲ್ಲಿ ಭಾನುವಾರ ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಕೊಡುತ್ತಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ‌ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ. ಜಿಲ್ಲೆಯ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಸಹಕಾರ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕಾಂಗ್ರೆಸ್‌ನವರು ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದರು. ಅವರ ಏಳಿಗೆಯನ್ನು ಸಹಿಸಲಿಲ್ಲ‌. ಅಂಬೇಡ್ಕರ್ ಅವರ ಹೋರಾಟಕ್ಕೆ ಯಾವತ್ತೂ ಬೆಂಬಲ ನೀಡಲಿಲ್ಲ. ಅಂಬೇಡ್ಕರ್‌ ಅಂತ್ಯ ಸಂಸ್ಕಾರ ಮಾಡಲು ಕಾಂಗ್ರೆಸ್‌ಗೆ ಒಂದು ಎಕರೆ ಜಾಗ ಕೊಡಲು ಶಕ್ತಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

ADVERTISEMENT

ಬಿಜೆಪಿ ಮುಖಂಡ ಡಾ.ಲಕ್ಷ್ಮಿಕಾಂತ್, ‘ಕಾಂಗ್ರೆಸ್‌ ದಲಿತ, ಸಂವಿಧಾನ ವಿರೋಧಿ ಪಕ್ಷ. ಕಾಂಗ್ರೆಸ್ ಅಂಬೇಡ್ಕರ್‌ ಆಶಯ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ಬಿಜೆಪಿ ಸರ್ಕಾರ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿದೆ. ಹಲವು ವರ್ಷಗಳ ಬೇಡಿಕೆ, ಹೋರಾಟಕ್ಕೆ ಸ್ಪಂದಿಸಿದೆ’ ಎಂದರು.

ಬಿಜೆಪಿ ಮುಖಂಡ ಅನಿಲ್‌ಕುಮಾರ್‌, ‘ಕಾಂಗ್ರೆಸ್‌ ಹಲವು ವರ್ಷಗಳಿಂದ ಪರಿಶಿಷ್ಟರನ್ನು ಓಲೈಕೆ ಮಾಡಿಕೊಂಡು ಬಂದಿದೆ. ಚುನಾವಣೆ ನಂತರ ಅವರ ಕಡೆ ತಿರುಗಿಯೂ ನೋಡುವುದಿಲ್ಲ. ಈಗ ಸಹ ಅದೇ ತಂತ್ರಗಾರಿಕೆ ಮಾಡಲು ಹೊರಟಿದ್ದಾರೆ’ ಎಂದು ದೂರಿದರು.

ಬಿಜೆಪಿ ಮುಖಂಡರಾದ ಅಂಜಿನಪ್ಪ, ವೆಂಕಟೇಶ್, ಟಿ.ಆರ್.ಸದಾಶಿವಯ್ಯ, ಓಂಕಾರ್, ನಟರಾಜು, ಅಂಜನಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.