ADVERTISEMENT

ತೊಗರಿ ಬೆಳೆ ಹಾನಿ: ರೈತರಲ್ಲಿ ಆತಂಕ

ಮೋಡ ಕವಿದ ವಾತಾವರಣ, ಸತತ ಮಳೆಯಿಂದ ತೊಂದರೆ

ಕೆ.ಆರ್.ಜಯಸಿಂಹ
Published 28 ಅಕ್ಟೋಬರ್ 2020, 4:52 IST
Last Updated 28 ಅಕ್ಟೋಬರ್ 2020, 4:52 IST
ಪಾವಗಡ ತಾಲ್ಲೂಕು ಅರಸೀಕೆರೆ ಬಳಿ ತೊಗರಿ ಗಿಡಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹೂವು, ಕಾಯಿ ಕಟ್ಟಿದೆ
ಪಾವಗಡ ತಾಲ್ಲೂಕು ಅರಸೀಕೆರೆ ಬಳಿ ತೊಗರಿ ಗಿಡಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹೂವು, ಕಾಯಿ ಕಟ್ಟಿದೆ   

‌‌ಪಾವಗಡ: ಮೋಡ ಕವಿದ ವಾತಾವರಣ, ಸತತ ಮಳೆಯಿಂದಾಗಿ ಈ ಬಾರಿ ತೊಗರಿ ಬೆಳೆಯೂ ಹಾನಿಯಾಗುವ ಆತಂಕ ತಾಲ್ಲೂಕಿನ ರೈತರನ್ನು ಕಾಡಿದೆ.

ತಾಲ್ಲೂಕಿನ ಪ್ರಮುಖ ಬೆಳೆ ಶೇಂಗಾ ಇಳುವರಿ ಕುಂಠಿತವಾಗಿದೆ. ಕಟಾವು ಮಾಡುವ ವೇಳೆಯಲ್ಲಿ ಮಳೆಗೆ ಸಿಕ್ಕಿ ಬಳ್ಳಿ ಕೊಳೆತಿದೆ. ಅಲ್ಪ ಸ್ವಲ್ಪ ಕೈಗೆ ಸಿಕ್ಕ ಬೆಳೆಗೆ ಬೆಲೆ ಸಿಗದೆ ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ ಶೇಂಗಾ ನಡುವೆ ಸಾಲುಗಳಲ್ಲಿ ತೊಗರಿ ಬೆಳೆಯುವ ವಾಡಿಕೆ ಇದೆ. ಕೆಲ ರೈತರು ಅಕ್ಕಡಿ ಸಾಲುಗಳಲ್ಲಿ ತೊಗರಿ ಬೆಳೆದರೆ ಸಾಕಷ್ಟು ಮಂದಿ ತೊಗರಿಯನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಾರೆ. ಶೇಂಗಾ ಕೈಕೊಟ್ಟರೂ ಹಾಕಿದ ಖರ್ಚನ್ನು ತೊಗರಿ ಮರಳಿಸುತ್ತದೆ ಎಂಬ ಭರವಸೆಯಲ್ಲಿ ರೈತರಿದ್ದರು.

ADVERTISEMENT

ಕಸಬಾ ಹೋಬಳಿಯಲ್ಲಿ 696 ಹೆಕ್ಟೇರ್, ನಾಗಲಮಡಿಕೆ ಹೋಬಳಿಯಲ್ಲಿ 1,172 ಹೆಕ್ಟೇರ್, ವೈ ಎನ್ ಹೊಸಕೋಟೆ ಹೋಬಳಿಯಲ್ಲಿ 1,312 ಹೆಕ್ಟೇರ್, ನಿಡಗಲ್ ಹೋಬಳಿಯಲ್ಲಿ 1,138 ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿದೆ. ತಾಲ್ಲೂಕಿನಾದ್ಯಂತ 4,318 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.

ಇತ್ತೀಚೆಗೆ 4ರಿಂದ 5 ದಿನ ಸತತವಾಗಿ ಬಿದ್ದ ಮಳೆಗೆ ರೈತರ ಆಶಾ ಗೋಪುರ ಕುಸಿದಿದೆ. ಮೋಡ ಮುಸುಕಿದ ವಾತಾವರಣದಿಂದಾಗಿ ಹೂವುಗಳು ಉದುರುತ್ತಿವೆ. ಕಾಯಿ ಕಟ್ಟುವ ಹಂತದಲ್ಲಿರುವ ಗಿಡಗಳಿಗೆ ಕೀಟಗಳು ಬಾಧಿಸುತ್ತಿವೆ. ಹೂವು, ಕಾಯಿ ಕಟ್ಟುವ ಹಂತದಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ತೊಗರಿ ಬೆಳೆಯೂ ಕೈ ತಪ್ಪುವ ಸಂಭವವಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಮೋಡ ಕವಿದ ವಾತಾವರಣ ಇರುವುದರಿಂದ ಬಿತ್ತನೆಯಾಗಿರುವ ಶೇ 50 ರಷ್ಟು ಪ್ರದೇಶದಲ್ಲಿ ಹೂವು, ಕಾಯಿ ಕಟ್ಟುತ್ತಿಲ್ಲ ಎಂದು ರೈತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮಳೆ ನಿಂತಿರುವುದರಿಂದ ಹೂವು ಕಟ್ಟಲು ಆರಂಭವಾಗಬಹುದು ಎನ್ನುತ್ತಾರೆ ಕೃಷಿ ತಜ್ಞರು.

ಈಗಾಗಲೇ ಹೂವು, ಕಾಯಿ ಬಿಟ್ಟಿರುವ ತೊಗರಿ ಗಿಡಗಳಿಗೆ ಕಾಯಿ ಕೊರಕ ಕೀಟ ಬಾದಿಸುತ್ತಿದೆ. ಎಲೆ, ಹೂವು, ಕಾಯಿಗಳನ್ನು ಹುಳುಗಳು ತಿನ್ನುತ್ತಿರುವುದರಿಂದ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. ಸೊರಗು ರೋಗದಿಂದ ಗಿಡಗಳು ಒಣಗುತ್ತಿವೆ.

ಮೋಡ ಮುಸುಕಿದ ವಾತಾವರಣದಿಂದ ಕೀಟ ಬಾಧೆ ಹೆಚ್ಚುತ್ತಿದೆ. ಹೂವು ಕಟ್ಟುತ್ತಿಲ್ಲ. ಮಳೆ ಕಡಿಮೆಯಾಗಿ ಬಿಸಿಲು ಬರುತ್ತಿರುವುದರಿಂದ ಹೂವು ಕಟ್ಟುವ ಸಾಧ್ಯತೆ ಇದೆ. ಕೀಟ ಬಾಧೆಗೆ ಇಮೊಮಿಕ್ಟೀನ್ ಬೆಂಜೋಏಟ್ ಅರ್ಧ ಗ್ರಾಂ ಔಷಧಿಯನ್ನು 1 ಲೀಟರ್‌ಗೆ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಕೀಟ ಬಾಧೆ ನಿಯಂತ್ರಿಸಬಹುದು ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಪ್ರವೀಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.