ADVERTISEMENT

ಬೆಳೆ ಮಾಹಿತಿ: ರೈತರು ದಾಖಲಿಸಿದ್ದು ಶೇ 46ರಷ್ಟು!

ಬೆಳೆ ಸಮೀಕ್ಷೆ; ಈಗ ಖಾಸಗಿ ವ್ಯಕ್ತಿಗಳಿಂದ ವಿವರ ದಾಖಲು

ಕೆ.ಜೆ.ಮರಿಯಪ್ಪ
Published 30 ಸೆಪ್ಟೆಂಬರ್ 2020, 2:54 IST
Last Updated 30 ಸೆಪ್ಟೆಂಬರ್ 2020, 2:54 IST
ರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆ
ರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆ   

ತುಮಕೂರು: ಜಿಲ್ಲೆಯಲ್ಲಿ ರೈತರು ತಮ್ಮ ಜಮೀನಿನ ಬೆಳೆಯನ್ನು ಮೊಬೈಲ್ ಆ್ಯಪ್ ಮೂಲಕ ದಾಖಲಿಸುವ ‘ಬೆಳೆ ಸಮೀಕ್ಷೆ’ಯನ್ನು ಪೂರ್ಣಗೊಳಿಸಿದ್ದಾರೆ. ಶೇ 46ರಷ್ಟು ರೈತರು ಮಾತ್ರ ಈ ಕೆಲಸಕ್ಕೆ ಸ್ಪಂದಿಸಿದ್ದಾರೆ!

ಹಿಂದಿನ ವರ್ಷಗಳಲ್ಲಿ ರೈತರು ನೀಡಿದ ಮಾಹಿತಿಯನ್ನು ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಕೃಷಿ ಜಮೀನಿನ ದಾಖಲೆಗಳಲ್ಲಿ ಬೆಳೆ ವಿವರಗಳನ್ನು ನಮೂದಿಸುತ್ತಿದ್ದರು. ಆದರೆ ಈ ಬಾರಿ ರೈತರೇ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ‘ರೈತರ ಬೆಳೆ ಸಮೀಕ್ಷೆ ಆ್ಯಪ್‌ 2020–21’ ಅಳವಡಿಸಿಕೊಂಡು ತಮ್ಮ ಭೂಮಿಯಲ್ಲಿ ಬೆಳೆದಿರುವ ಬೆಳೆಯನ್ನು ದಾಖಲಿಸುವ ಅವಕಾಶವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು.

ರೈತರ ಸಮಸ್ಯೆ: ರೈತರೆಲ್ಲ ಅಕ್ಷರಸ್ಥರಲ್ಲ. ಸಾಕಷ್ಟು ಮಂದಿಗೆ ಕೀಪ್ಯಾಡ್ ಇರುವ ಮೊಬೈಲ್ ಬಳಕೆಯೇ ಸರಿಯಾಗಿ ಗೊತ್ತಿಲ್ಲ. ಇನ್ನೂ ಆ್ಯಂಡ್ರಾಯ್ಡ್ ಮೊಬೈಲ್ ಬಳಸುವುದು ಕಷ್ಟಕರವಾಗಿತ್ತು. ಸುಶಿಕ್ಷಿತ, ಮೊಬೈಲ್ ಬಳಕೆ ಬಗ್ಗೆ ತಿಳಿದಿದ್ದ ಕೆಲವು ರೈತರು ಮಾತ್ರ ಮಾಹಿತಿ ದಾಖಲಿಸಿದ್ದರು. ಇನ್ನು ಕೆಲವರು ತಿಳಿದಿದ್ದವರ ಸಹಕಾರ ಪಡೆದು, ಮಕ್ಕಳ ನೆರವಿನೊಂದಿಗೆ ಈ ಕೆಲಸ ಪೂರ್ಣಗೊಳಿಸಿದ್ದರು.

ADVERTISEMENT

ಬೆಳೆ ಸಮೀಕ್ಷೆಗೆ ಆಗಸ್ಟ್ 10ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 23ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಶೇ 46ರಷ್ಟು ಗುರಿಯನ್ನಷ್ಟೇ ಮುಟ್ಟಲು ಸಾಧ್ಯವಾಗಿತ್ತು. ಇನ್ನೂ ಅರ್ಧಕ್ಕೂ ಹೆಚ್ಚುಮಂದಿ ಬೆಳೆ ವಿವರಗಳನ್ನು ದಾಖಲಿಸುವ ಗೋಜಿಗೆ ಹೋಗಿರಲಿಲ್ಲ. ಮಾಹಿತಿ ಕೊರತೆಯಿಂದಾಗಿಯೂ ಕೆಲವರು ಈ ಕೆಲಸಕ್ಕೆ ಮುಂದಾಗಲಿಲ್ಲ. ಹಾಗಾಗಿ ಬೆಳೆ ಸಮೀಕ್ಷೆಯು ನಿರೀಕ್ಷಿತ ಗುರಿಮುಟ್ಟಲು ಸಾಧ್ಯವಾಗಲಿಲ್ಲ.

ಕೃಷಿ ಇಲಾಖೆ ಪ್ರಯತ್ನ: ರೈತರು ದಾಖಲಿಸಲು ನೀಡಿದ್ದ ಸಮಯ ಮುಗಿದಿದ್ದು, ಈಗ ಕೃಷಿ ಇಲಾಖೆಯೇ ಬೆಳೆ ವಿವರ ಅಪ್‌ಲೋಡ್ ಮಾಡುವ ಕೆಲಸಕ್ಕೆ ಮುಂದಾಗಿದೆ. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ, ಬೆಳೆ ವಿವರ ದಾಖಲಿಸಲಾಗುತ್ತಿದೆ. ಹಳ್ಳಿಗಳಲ್ಲಿರುವ ಸ್ವಲ್ಪ ಮಟ್ಟಿಗೆ ಮೊಬೈಲ್ ಬಳಕೆ ಗೊತ್ತಿರುವ ವಿದ್ಯಾವಂತ ಯುವಕರನ್ನು ಗುರುತಿಸಿ ‘ಖಾಸಗಿ ನಿವಾಸಿಗಳು’ ಮೂಲಕ ಈ ಕೆಲಸ ಆರಂಭಿಸಿದೆ. ಈ ಯುವಪಡೆಗೆ ತರಬೇತಿ ನೀಡಿದ್ದು, ರೈತರ ಜಮೀನಿನ ಬಳಿಗೆ ಹೋಗಿ ವಿವರಗಳನ್ನು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕ ಸಮಸ್ಯೆ ಇದ್ದವರಿಗೆ ನೆರವಾಗುತ್ತಿದ್ದಾರೆ.

‘ಖಾಸಗಿ ನಿವಾಸಿಗಳು’ ಬೆಳೆ ಸಮೀಕ್ಷೆ ಚುರುಕುಗೊಳಿಸಿದ್ದು, ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಈವರೆಗೆ ಶೇ 88ರಷ್ಟು ಕೆಲಸ ಪೂರ್ಣಗೊಂಡಿದ್ದು, ಮಂಗಳವಾರ ಶೇ 90ರಷ್ಟು ಮುಗಿಯಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇದೇ ವೇಗದಲ್ಲಿ ಮುನ್ನಡೆದರೆ ಶೇ ನೂರರಷ್ಟು ಗುರಿ ದಾಖಲಿಸಲಾಗುವುದು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಪ್ಲಾಟ್‌ಗಳ ಸಂಖ್ಯೆ ಹೆಚ್ಚು

ತುಮಕೂರು ಜಿಲ್ಲೆಯಲ್ಲಿ 16.93 ಲಕ್ಷ ಪ್ಲಾಟ್‌ಗಳಲ್ಲಿ ಬೆಳೆ ಸಮೀಕ್ಷೆ ಮಾಡಬೇಕಿದೆ. ಕೆಲವು ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆ ಮಾಡುವ ಪ್ಲಾಟ್‌ಗಳ ಸಂಖ್ಯೆ ಕಡಿಮೆ ಇರುತ್ತವೆ. 4ರಿಂದ 5 ಲಕ್ಷ ಪ್ಲಾಟ್‌ಗಳು ಇರುವ ಜಿಲ್ಲೆಗಳು ಈಗಾಗಲೇ ಪೂರ್ಣಗೊಳಿಸಿವೆ. ಸಣ್ಣ ಜಿಲ್ಲೆಗಳಲ್ಲಿ ಬೇಗ ಸಮೀಕ್ಷೆ ಮುಗಿದಿರುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ಲಾಟ್‌ಗಳು ಹಾಗೂ ವೈವಿಧ್ಯಮಯ ಬೆಳೆಗಳು ಇರುವುದರಿಂದ ಈ ಕೆಲಸ ನಿಧಾನವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಇನ್ನೂ ಸುಮಾರು 2 ಲಕ್ಷ ಪ್ಲಾಟ್‌ಗಳ ಸಮೀಕ್ಷೆಯಷ್ಟೇ ಬಾಕಿ ಇದ್ದು, ಶೀಘ್ರ ಪೂರ್ಣಗೊಳಿಸಲಾಗುತ್ತದೆ. ನಮ್ಮ ಜತೆಗೆ ಕಂದಾಯ, ತೋಟಗಾರಿಕೆ ಇಲಾಖೆ ಕೈಜೋಡಿಸಿದ್ದು, ಕೆಲಸ ಸುಲಭವಾಗಿದೆ. ಗುರಿ ತಲುಪುವತ್ತ ಹೆಜ್ಜೆ ಹಾಕಿದ್ದೇವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.