ADVERTISEMENT

ಹೆಸರುಕಾಳು: ನಿಗದಿಯಾಗದ ಬೆಲೆ

ಹುಳಿಯಾರು: ಕಾಳು ಬಿಡಿಸುವ ಕಾರ್ಯದಲ್ಲಿ ರೈತರು ಮಗ್ನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 5:53 IST
Last Updated 15 ಜುಲೈ 2024, 5:53 IST
ಹುಳಿಯಾರು ಹೋಬಳಿ ನಂದಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಹೆಸರು ಕಾಳು ಬಿಡಿಸುತ್ತಿರುವ ರೈತರು
ಹುಳಿಯಾರು ಹೋಬಳಿ ನಂದಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಹೆಸರು ಕಾಳು ಬಿಡಿಸುತ್ತಿರುವ ರೈತರು   

ಹುಳಿಯಾರು: ಹೆಸರು ಬೆಳೆ ಕೊಯ್ಲು ಹಂತಕ್ಕೆ ಬಂದಿದ್ದು ಗಿಡಗಳಿಂದ ಕಾಳು ಬೇರ್ಪಡಿಸುವ ಕಾರ್ಯದಲ್ಲಿ ರೈತರು ಮಗ್ನರಾಗಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಇನ್ನೂ ಹೆಸರಿಗೆ ಬೆಲೆ ನಿಗದಿಯಾಗಿಲ್ಲ.

ಹಂದನಕೆರೆ, ಶೆಟ್ಟಿಕೆರೆ, ಚಿಕ್ಕನಾಯಕನಹಳ್ಳಿ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಹೆಸರು ಬೆಳೆ ಅಲ್ಪಸ್ವಲ್ಪ ಬಂದಿದೆ. ಭರಣಿ ಮಳೆ ಕೈಕೊಟ್ಟು ಕೊನೇಘಟ್ಟದಲ್ಲಿ ಮಳೆಯಾದ ಕಾರಣ ಹೆಸರು ಬಿತ್ತನೆಗೆ ಹಿನ್ನಡೆಯಾಗಿತ್ತು. ತಡವಾಗಿ ಬಿತ್ತನೆ ಆಗಿದ್ದರಿಂದ ಬೆಳೆ ಬರುವುದು ತಡವಾಗಿದೆ. ಒಣಗಿರುವ ಕಾಯಿಗಳನ್ನು ಗಿಡಗಳಿಂದ ಬಿಡಿಸುವ ಸಿದ್ಧತೆ ನಡೆದಿದೆ.

ಹೆಸರು ಹೈಬ್ರಿಡ್‌ ತಳಿಯಾದರೇ ಒಂದೇ ಬಾರಿ ಒಣಗುವುದರಿಂದ ಗಿಡಗಳನ್ನೇ ಕಿತ್ತು ಕಾಳನ್ನು ಪಡೆಯಬಹುದು. ಆದರೆ ರೈತರು ಶೇಖರಣೆ ಮಾಡಿಕೊಂಡಿರುವ ನಾಟಿ ಹೆಸರುಕಾಳು ಹಂತ ಹಂತದಲ್ಲಿ ಒಣಗುತ್ತದೆ. ಸುಮಾರು ಮುರ್ನಾಲ್ಕು ಬಾರಿ ಬಿಡಿಸ ಬೇಕಿರುವುದರಿಂದ ಕೂಲಿ ಆಳುಗಳ ಸಮಸ್ಯೆ ಎದುರಾಗುತ್ತದೆ. ಈಗಾಗಲೇ ಎಲ್ಲೆಡೆ ಕಾಯಿ ಒಣಗಿರುವುದರಿಂದ ಆಳುಗಳ ಸಮಸ್ಯೆ ಎದುರಾಗಿ ಕೆಲವೆಡೆ ಮುಯ್ಯಾಳು ಪದ್ಧತಿ ಮೂಲಕ ಬಿಡಿಸುವ ಕಾರ್ಯ ನಡೆಯುತ್ತಿದೆ.

ADVERTISEMENT

ರೈತರು ನಾ ಮುಂದು ತಾ ಮುಂದು ಎಂದು ಗಿಡಗಳಿಂದ ಕಾಳು ಬೇರ್ಪಡಿಸಲು ಮುಂದಾಗಿದ್ದಾರೆ. ಆದರೆ ಆಗಾಗ ಬಂದು ಹೋಗುವ ಸೋನೆ ಮಳೆಯಿಂದ ಕೊಯ್ಲಿಗೆ ಅಡ್ಡಿಯಾಗಿದೆ. ಮೋಡ ಮುಸುಕಿದ ವಾತಾವರಣದಿಂದ ಕೂಡ ಕಾಳು ಬೇರ್ಪಡಿಸಲು, ಒಣಗಿಸಲು ಅಡ್ಡಿಯಾಗಿದೆ ಎಂದು ರೈತರು ಹೇಳುತ್ತಾರೆ.

ಸಾಮಾನ್ಯವಾಗಿ ಹೆಸರುಕಾಳು ಹೆಚ್ಚಾಗಿ ಮಾರುಕಟ್ಟೆಗೆ ಪ್ರವೇಶಿಸಿದಾಗಲೇ ಬೆಲೆ ನಿಗದಿಯಾಗುವುರಿಂದ ಈಗಲೇ ನಿರ್ದಿಷ್ಟ ಬೆಲೆ ಗೊತ್ತಾಗುವುದಿಲ್ಲ. ಹುಳಿಯಾರು ಮಾರುಕಟ್ಟೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಈ ಭಾಗದ ಹೆಸರು ರವಾನೆಯಾಗುತ್ತದೆ. ಉತ್ತಮ ಫಸಲು ಬಂದು ಹೊರ ರಾಜ್ಯಗಳಿಗೆ ಹೋದರೆ ಉತ್ತಮ ಬೆಲೆಯೂ ಸಿಗುತ್ತದೆ ಎನ್ನುವುದು ರೈತರ ಅಭಿಪ್ರಾಯ.

ಅಲಸಂದೆ ಬೆಳೆ: ಈ ಬಾರಿ ಹೆಸರು ಬಿತ್ತನೆಗೆ ಕಾಲ ಮಿಂಚಿದ ಕಾರಣ ಹೆಚ್ಚು ಅಲಸಂದೆ ಬಿತ್ತನೆಯಾಗಿದೆ. ಈಗಾಗಲೇ ಕೆಲ ಕಡೆ ಕಾಳು ಬೇರ್ಪಡಿಸುವ ಕಾರ್ಯ ನಡೆಯುತ್ತಿದ್ದು ಮಾರುಕಟ್ಟೆಯಲ್ಲಿ ಅಲಸಂದೆಯನ್ನು ₹6 ಸಾವಿರಕ್ಕೆ ಕೊಳ್ಳುತ್ತಿದ್ದಾರೆ. ತಡವಾಗಿ ಬಿತ್ತನೆಯಾಗಿರುವ ಹೆಸರು, ಅಲಸಂದೆ ಮಳೆ ಕೈಕೊಟ್ಟ ಕಾರಣ ಒಣಗಿ ಹೋಗಿದೆ.

ಬೇಡಿಕೆ ಮೇಲೆ ಬೆಲೆ ನಿಗದಿ ಮಾರುಕಟ್ಟೆಗೆ ಆವಕವಾಗುವ ಹೆಸರಿನ ಮೇಲೆ ಬೆಲೆ ನಿಗದಿಯಾಗುತ್ತದೆ. ಹೊರ ರಾಜ್ಯಗಳಲ್ಲಿ ಬೇಡಿಕೆ ಬಂದು ಹೊರಗಿನವರು ಕೊಳ್ಳಲು ಬಂದರೆ ಮಾತ್ರ ಉತ್ತಮ ಬೆಲೆ ರೈತರಿಗೆ ಲಭಿಸುತ್ತದೆ. ಹೆಸರುಕಾಳು ಮಾರುಕಟ್ಟೆ ಪ್ರವೇಶಿಸಿದೆ. ಸದ್ಯಕ್ಕೆ ಯಾವ ಬೆಲೆಗೆ ಕೊಳ್ಳಬೇಕು ಎನ್ನುವುದು ತಿಳಿಯುತ್ತಿಲ್ಲ. ಕ್ವಿಂಟಲ್‌ಗೆ ₹6 ಸಾವಿರದಿಂದ ₹7 ಸಾವಿರಕ್ಕೆ ಕೊಳ್ಳುತ್ತಿದ್ದಾರೆ. ಹೊರ ರಾಜ್ಯಗಳಲ್ಲಿನ ಬೇಡಿಕೆ ಮೇಲೆ ಬೆಲೆ ನಿಗದಿಯಾಗುತ್ತದೆ ಎಂದು ಎಪಿಎಂಸಿ ವರ್ತಕ ಎಲ್.ಆರ್.ಬಾಲಾಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.