ADVERTISEMENT

ಗಂಗೆ ಶಾಪ; ಅರ್ಥವಿಲ್ಲದ ಹೇಳಿಕೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 16:35 IST
Last Updated 1 ಜುಲೈ 2019, 16:35 IST
ಎಸ್‌.ಆರ್‌. ಶ್ರೀನಿವಾಸ್‌
ಎಸ್‌.ಆರ್‌. ಶ್ರೀನಿವಾಸ್‌   

ತುಮಕೂರು: ‘ಜಿ.ಎಸ್.ಬಸವರಾಜು ಹಿಂದೆ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿದ್ದವರು. ಆಗ ಗಂಗಾ ಕಾವೇರಿ ಒಂದು ಮಾಡುತ್ತೇವೆ ಎಂದು ಹೇಳುತ್ತಿದ್ದರು. ಈಗ ನಾಲೆ ಮೇಲೆ ಹೋಗಿ ಬಂದು ನೀರು ಬಿಡಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರು ಏನೂ ಕೆಲಸ ಮಾಡುವುದಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಈ ಹಿಂದೆ ಅವರ ಜತೆ ಓಡಾಡಿದ್ದೇನೆ. ಅವರ ಸಾಮರ್ಥ್ಯ ಗೊತ್ತಿದೆ. ಗಂಗೆ ಶಾಪ ಎಂದು ಹೇಳಿರುವುದರಲ್ಲಿ ಏನಾದರೂ ಅರ್ಥವಿದೆಯೇ? ಏನು ಹಾಗೆಂದರೆ? ಈ ರೀತಿ ಹೇಳಿಕೆ ನೀಡುವ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ' ಎಂದು ಹೇಳಿದರು.

ಹೇಮಾವತಿ ನಾಲೆ ಮತ್ತು ನರೇಂದ್ರ ಮೋದಿ ಹೆಸರು ಹೇಳಿಕೊಂಡು ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರಿಗೆ ದಿಕ್ಕು ತಪ್ಪಿಸಿ ಗೆದ್ದಿದ್ದಾರೆ. ನೋಡೋಣ. ಎಲ್ಲೆಲ್ಲಿಂದ ಹೇಗೆ ನೀರು ತರುತ್ತಾರೆ ಎಂದು ಹೇಳಿದರು.

ADVERTISEMENT

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿದರೆ ಖಾಸಗಿ ಶಾಲೆಗಳ ಬಗ್ಗೆ ಪೋಷಕರು, ಮಕ್ಕಳ ವ್ಯಾಮೋಹ ತಾನಾಗಿಯೇ ಕಡಿಮೆ ಆಗುತ್ತದೆ. ಹೀಗಾಗಿ, ನಮ್ಮ ಶಾಲೆಗಳ ಸುಧಾರಣೆಯತ್ತ ಹೆಚ್ಚು ಗಮನಹರಸುತ್ತಿದ್ದೇವೆ ಎಂದರು.

‘ನಮ್ಮ ಸರ್ಕಾರಿ ಶಾಲೆಗೆ ಶಿಕ್ಷಕರನ್ನು ಅರ್ಹತಾ ಪರೀಕ್ಷೆಯಡಿ ನೇಮಕ ಮಾಡಿಕೊಳ್ಳಲಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಲು ಅರ್ಹ ಪದವಿ ಇಲ್ಲದವರು, ಪದವಿಯಲ್ಲಿ ಶೇ 35 ಅಂಕ ಪಡೆದವರು ನೇಮಿಸಿಕೊಂಡು ಹೈ ಕ್ಲಾಸ್ ಶಿಕ್ಷಣ ಕೊಡುತ್ತೇವೆ ಎಂದು ಹೇಳಿಕೊಳ್ಳುವುದು ನಡೆದಿದೆ. ಪೋಷಕರೂ ಅಂತಹ ಶಾಲೆಗೆ ಮಾರು ಹೋಗಿದ್ದಾರೆ, ಇದಕ್ಕೆ ಪರಿಹಾರ ಸರ್ಕಾರಿ ಶಾಲೆ ಶಿಕ್ಷಣ ಗುಣಮಟ್ಟ ಸುಧಾರಣೆಯೊಂದೇ ಪರಿಹಾರ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.