ADVERTISEMENT

ತುರುವೇಕೆರೆ: ರಾಸು ಮಾಲೀಕರಿಗೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:38 IST
Last Updated 8 ಅಕ್ಟೋಬರ್ 2025, 6:38 IST
ತುರುವೇಕೆರೆಯ ನಂದಿನಿ ಕ್ಷೀರ ಭವನದಲ್ಲಿ ಮೃತ ರಾಸು ಮಾಲಕ ರೈತರಿಗೆ ವಿಮಾ ಚೆಕ್ ವಿತರಣೆ ಮಾಡಲಾಯಿತು
ತುರುವೇಕೆರೆಯ ನಂದಿನಿ ಕ್ಷೀರ ಭವನದಲ್ಲಿ ಮೃತ ರಾಸು ಮಾಲಕ ರೈತರಿಗೆ ವಿಮಾ ಚೆಕ್ ವಿತರಣೆ ಮಾಡಲಾಯಿತು   

ತುರುವೇಕೆರೆ: ತಾಲ್ಲೂಕಿನಲ್ಲಿರುವ 130ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ಲಾಭದಲ್ಲಿ ನಡೆಯುತ್ತಿವೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನದಲ್ಲಿ ಸೋಮವಾರ ನಡೆದ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಪ್ರಾದೇಶಿಕ ಸಭೆ, ಮೃತಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ವಿತರಣೆ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಒಂದು ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹ ಮಾಡಲಾಗುತ್ತಿದೆ. ಡೇರಿಗಳ ಕಟ್ಟಡ ನಿರ್ಮಾಣಕ್ಕೆ ₹6 ಲಕ್ಷ, ಮೇಲ್ಭಾಗದ ಕಟ್ಟಡ ನಿರ್ಮಾಣಕ್ಕೆ ಸುಮಾರು ₹4 ಲಕ್ಷ, ದುರಸ್ತಿಗಾಗಿ ₹1.5 ಲಕ್ಷ ಒಕ್ಕೂಟದಿಂದ ನೀಡಲಾಗುತ್ತಿದೆ. ಮೃತಪಟ್ಟ ರಾಸುಗಳಿಗೆ ಗರಿಷ್ಠ ₹70 ಸಾವಿರ ನಿಗದಿಪಡಿಸಲಾಗಿದೆ. ನಿವೃತ್ತರಾಗುವ ಕಾರ್ಯದರ್ಶಿಗೆ ಇಡಗಂಡು ರೂಪದಲ್ಲಿ ₹3 ಲಕ್ಷ ನೀಡಬೇಕೆಂದು ಕಾರ್ಯದರ್ಶಿಗಳ ಬೇಡಿಕೆ ಇದೆ. ಅದನ್ನು ನಿರ್ದೇಶಕರ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ADVERTISEMENT

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕಗಳಿಸಿದ 41 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿಯ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹೆಚ್ಚು ಹಾಲು ಶೇಖರಿಸಿದ್ದ ಡೇರಿ, ಹೆಚ್ಚು ಹಾಲು ಹಾಕಿದ ರೈತರನ್ನೂ ಸನ್ಮಾನಿಸಲಾಯಿತು. 

ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್, ವ್ಯವಸ್ಥಾಪಕ ಚಂದ್ರಶೇಖರ್, ಶ್ರೀನಿವಾಸ್, ವಿಸ್ತರಣಾಧಿಕಾರಿ ಮಂಜುನಾಥ್‌, ಕಿರಣ್‌, ದಿವಾಕರ್‌, ಸುನಿಲ್‌, ಡಾ.ಲೋಹಿತ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.