ತುಮಕೂರು: ದಲಿತ ಸಮುದಾಯದ ಡಾ.ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿ ಆಗಿರುವುದಕ್ಕೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಸಮುದಾಯದ ಮುಖಂಡರ ಬಗ್ಗೆ, ಸಮುದಾಯದ ಬಗ್ಗೆ ಅವಹೇಳನ ಮಾಡಿದರೆ ದಲಿತರು ಸಹಿಸುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣಮೂರ್ತಿ ಎಚ್ಚರಿಸಿದರು.
ನಗರದಲ್ಲಿ ಶನಿವಾರ ಗೋಲ್ಡನ್ ಪ್ಯಾಲೇಸ್‌ನಲ್ಲಿ ನಡೆದ ಡಾ.ಜಿ.ಪರಮೇಶ್ವರ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.
‘ರಾಜಣ್ಣ ಅವರು ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಮಗ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೂ ಪರಮೇಶ್ವರ ಅವರನ್ನು ಗೆಲ್ಲಿಸಿದ್ದು ನಾನೇ ಎಂದು ರಾಜಣ್ಣ ಹೇಳುತ್ತಿರುವುದು ಹಾಸ್ಯಾಸ್ಪದ’ ಎಂದರು.
ಡಾ.ಪರಮೇಶ್ವರ ಅವರ ಏಳಿಗೆ ಸಹಿಸದ ರಾಜಣ್ಣ ಅವರನ್ನು ದಲಿತರು ಒಪ್ಪುತ್ತಾರೆಯೇ? ದಲಿತ ನಾಯಕರನ್ನು ತುಳಿದು ರಾಜಕೀಯದಲ್ಲಿ ಮೇಲೆ ಬಂದಿರುವ ರಾಜಣ್ಣ ಅವರನ್ನು ದಲಿತರು ಮನಸ್ಸು ಮಾಡಿದರೆ ಸೋಲಿಸುವುದು ಆಗುವುದಿಲ್ಲವೇ, ರಾಜಣ್ಣ ರಾಜಕೀಯ ಮಾಡುವುದಾದರೆ ಮಾಡಿಕೊಳ್ಳಲಿ. ಸಮುದಾಯ ಅವಹೇಳನ ಮಾಡಿದರೆ ಒಪ್ಪುವುದಿಲ್ಲ ಎಂದರು.
ಮುಖಂಡರಾದ ರೆಡ್ಡಿ ಚಿನ್ನಯಲ್ಲಪ್ಪ, ಕೆಂಚಮಾರಯ್ಯ, ಕೊಂಡವಾಡಿ ಚಂದ್ರಶೇಖರ್, ಡಿಸಿಸಿ ಅಧ್ಯಕ್ಷ ರಾಮಕೃಷ್ಣಯ್ಯ, ವಾಲೆಚಂದ್ರಯ್ಯ, ಉಪಮೇಯರ್ ರೂಪಶ್ರೀ, ಅತೀಕ್ ಅಹಮ್ಮದ್, ಬಜಗೂರು ಮಂಜುನಾಥ್, ದಿನೇಶ್, ನರಸೀಯಪ್ಪ, ಮುರುಳೀಧರ ಹಾಲಪ್ಪ, ಮೈಲಾರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.