ADVERTISEMENT

ಸೋಮಣ್ಣನ ದರ್ಬಾರ್; ಕಲಾವಿದರು ಕಂಗಾಲು

ಸ್ತಬ್ಧ ಚಿತ್ರದಲ್ಲಿ ತೊಡಗಿದ್ದವರನ್ನು ಏಕಾಏಕಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 12:31 IST
Last Updated 27 ಸೆಪ್ಟೆಂಬರ್ 2019, 12:31 IST
ನಿರ್ಮಾಣಹಂತದಲ್ಲಿರುವ ಸ್ತಬ್ಧ ಚಿತ್ರ
ನಿರ್ಮಾಣಹಂತದಲ್ಲಿರುವ ಸ್ತಬ್ಧ ಚಿತ್ರ   

ತುಮಕೂರು: ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ‘ಪ್ರಭಾವ’ದಿಂದ ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ಸಾಗುವ ಸ್ತಬ್ಧಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದ ಕಲಾವಿದರನ್ನು ಏಕಾಏಕಿ ಬದಲಾಯಿಸಲಾಗಿದೆ.

ಪ್ರತಿ ಜಿಲ್ಲಾ ಪಂಚಾಯಿತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸ್ತಬ್ಧ ಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಈ ನಿರ್ಮಾಣ ಕಾರ್ಯವನ್ನು ಸ್ಥಳೀಯ ಕಲಾವಿದರಿಗೆ ನೀಡಲಾಗುತ್ತದೆ.

ತುಮಕೂರು ಜಿಲ್ಲಾ ಪಂಚಾಯಿತಿಯು ಕಲಾವಿದ ತಿಪಟೂರು ಕೃಷ್ಣ ಅವರ ತಂಡಕ್ಕೆ ‘ಶಿವಕುಮಾರ ಸ್ವಾಮೀಜಿ ಮತ್ತು ಸಮಗ್ರ ಕೃಷಿ ಪದ್ಧತಿ ರೈತನ ಉನ್ನತಿ‘ ಎಂಬ ಪರಿಕಲ್ಪನೆಯಡಿ ಸ್ತಬ್ಧ ಚಿತ್ರ ನಿರ್ಮಿಸಲು ಅವಕಾಶ ನೀಡಿತ್ತು. ಈ ಸಂಬಂಧ ಅವರಿಗೆ ಆದೇಶ ಪತ್ರವನ್ನೂ ನೀಡಿತ್ತು.

ADVERTISEMENT

ಜಿಲ್ಲಾ ಪಂಚಾಯಿತಿ ಪರತ್ತುಗಳ ಅನ್ವಯ ಸೆ.18ರಿಂದ ಅವರು ಕೆಲಸವನ್ನೂ ಆರಂಭಿಸಿದ್ದರು. ಅ.6ರ ಒಳಗೆ ಸ್ತಬ್ಧ ಚಿತ್ರ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಅದರಂತೆ ಈ ತಂಡದ 17 ಕಲಾವಿದರು ಕೆಲಸದಲ್ಲಿ ತೊಡಿಗಿದ್ದರು.

ತಿಪಟೂರು ಕೃಷ್ಣ ತಂಡ 2014ರಿಂದಲೂ ತುಮಕೂರು ಜಿಲ್ಲೆಯಿಂದ ದಸರಾಗೆ ಸ್ತಬ್ಧಚಿತ್ರ ಮಾಡುತ್ತಿದೆ. ಈ ತಂಡಕ್ಕೆ ಎರಡು ಬಾರಿ ಪ್ರಶಸ್ತಿ ಸಹ ಬಂದಿದೆ.

‘ನನ್ನಿಂದ ವಾಸಪ್ ಪಡೆಯುವುದಷ್ಟೇ ಅಲ್ಲ ಮಂಡ್ಯ ಹೀಗೆ ಬೇರೆ ಬೇರೆ ಜಿಲ್ಲೆಯ ಕಲಾವಿದರಿಂದಲೂ ವಾಪಸ್ ಪಡೆದಿದ್ದಾರೆ. ಬಡ ಕಲಾವಿದರು ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಅಧಿಕಾರಿಗಳು ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ’ ಎಂದು ತಿಪಟೂರು ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 60ರಷ್ಟು ಕೆಲಸ ಆಗಿದೆ. ಇದಕ್ಕಾಗಿ ₹ 5.5 ಲಕ್ಷ ಹಣ ಖರ್ಚು ಮಾಡಿದ್ದೇನೆ. ಒಬ್ಬರು ಒಂದು ಅಥವಾ ಎರಡು ಸ್ತಬ್ಧಚಿತ್ರ ಮಾಡಬೇಕು. ಆದರೆ ನೀತಿ ನಿಯಮ ಕಾನೂನಿನ ಉಲ್ಲಂಘನೆ ಆಗುತ್ತಿದೆ. ಹೀಗೆ ಒಬ್ಬರಿಂದ ಕಿತ್ತು ಅವರಿಗೆ ಬೇಕಾದವರಿಗೆ, ಹಿಂಬಾಲಕರಿಗೆ ಕೆಲಸ ಕೊಟ್ಟಿದ್ದಾರೆ. ನಮ್ಮಿಂದ ಕೆಲಸ ಕಿತ್ತು ರಾಯಚೂರಿನ ಕಲಾವಿದರಿಗೆ ನೀಡಿದ್ದಾರೆ ಎಂದು

‘ಸಚಿವ ವಿ.ಸೋಮಣ್ಣ ಅವರ ಹಸ್ತಕ್ಷೇಪದಿಂದಲೇ ನಮಗೆ ಈ ಕೆಲಸ ತಪ್ಪಿದೆ ಎನ್ನುವುದು ಗೊತ್ತಾಗಿದೆ. ನನ್ನ ಯಾವ ಸ್ತಬ್ಧ ಚಿತ್ರವೂ ಕಳಪೆ ಆಗಿಲ್ಲ. ಎರಡು ಬಾರಿ ಪ್ರಶಸ್ತಿ ಸಹ ಪಡೆದಿದ್ದೇವೆ. ಇದರಿಂದ ಆರ್ಥಿಕ ಅಷ್ಟೇ ಅಲ್ಲ ಮಾನನಷ್ಟವೂ ಆಗಿದೆ. ಸರ್ಕಾರಿ ಹಣವನ್ನು ದುರುಪಯೋಗವಾಗುತ್ತಿದೆ’ ಎಂದು ಆರೋಪಿಸಿದರು.

***

ಪಕೋಡ ಹೊತ್ತು ಪ್ರತಿಭಟನೆ

ಸ್ತಬ್ಧಚಿತ್ರ ನಿರ್ಮಾಣ ಹಿಂಪಡೆದಿರುವುದನ್ನು ಕಲಾನಿರ್ದೇಶಕ ಹಾಗೂ ಈ ತಂಡದ ಸದಸ್ಯ ಮಲ್ಲಿಕಾರ್ಜುನ ಮತಿಘಟ್ಟ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ತುಮಕೂರು ಜಿಲ್ಲಾ ಪಂಚಾಯಿತಿ ನಮಗೆ ಮೈಸೂರು ದಸರಾದಲ್ಲಿ ಸ್ತಬ್ಧಚಿತ್ರ ನಿರ್ಮಿಸಲು ಕಾರ್ಯಾದೇಶ ನೀಡಿತ್ತು. ಆದರೆ ರಾಜಕೀಯ ಒತ್ತಡದಿಂದ ಸದ್ಯಕ್ಕೆ ಮೌಖಿಕವಾಗಿ ಹೇಳಿ ಕೆಲಸ ನಿಲ್ಲಿಸಿದ್ದಾರೆ.

ಈಗಿರುವ ಪ್ರಶ್ನೆ ಏನೆಂದರೆ ಸದ್ಯದ ನಮ್ಮ ದೇಶದ ಪರಿಸ್ಥಿತಿಯಲ್ಲಿ ಉದ್ಯೋಗಿಗಳು ಕಮ್ಮಿ ಆಗಿ ನಿರುದ್ಯೋಗಿಗಳಾಗುತ್ತಿದ್ದೇವೆ. ನಮ್ಮ ಜನಪ್ರತಿನಿಧಿಗಳಿಗೆ ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ. ಅದಕ್ಕೋಸ್ಕರ ನಾನು ಪಕೋಡ ಮಾರುವ ಬದಲು ನಾನೇ ಪಕೋಡ ಆಗಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಪಕೋಡ ಮಾದರಿಯ ಚಿತ್ರವನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ.

ಸರಿಯಾಗಿ ಮಾಡಿಲ್ಲ; ಬದಲಾಯಿಸಿದ್ದೇವೆ’

ಮೈಸೂರು: ‘ನಡೆದಾಡುವ ದೇವರು ಎಂದೇ ಹೆಸರಾದ ತುಮಕೂರಿನ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರನ್ನೊಳಗೊಂಡ ಸ್ತಬ್ಧಚಿತ್ರ ರೂಪಿಸುತ್ತಿದ್ದ ಕಲಾವಿದರು ಸಮರ್ಪಕವಾಗಿ ಕೆಲಸ ಮಾಡಿರಲಿಲ್ಲ. ಆದ್ದರಿಂದ ಬದಲಿಸಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

‘ಕಲಾವಿದರು ಈಗಾಗಲೇ ಖರ್ಚು ಮಾಡಿರುವ ಹಣವನ್ನು ವಾಪಸ್‌ ಕೊಡಿಸುವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.