ADVERTISEMENT

ಲೋಕಸಭಾ ಚುನಾವಣೆ: ತುಮಕೂರು ಕ್ಷೇತ್ರ 12ರ ವೇಳೆಗೆ ಸ್ಪಷ್ಟ ಚಿತ್ರಣ

ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2019, 14:21 IST
Last Updated 21 ಮೇ 2019, 14:21 IST
ಡಾ.ಕೆ.ರಾಕೇಶ್ ಕುಮಾರ್
ಡಾ.ಕೆ.ರಾಕೇಶ್ ಕುಮಾರ್   

ತುಮಕೂರು: ‘ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗರಿಷ್ಠ 20 ನಿಮಿಷಕ್ಕೆ ಪ್ರತಿ ಸುತ್ತಿನ ಮತ ಎಣಿಕೆ ಮುಕ್ತಾಯವಾಗಲಿದೆ. ಮಧ್ಯಾಹ್ನ 12ರ ವೇಳೆಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದರು.

‌ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ಕ್ಷೇತ್ರದ ಮತ ಎಣಿಕೆ ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಗುಬ್ಬಿ ಕ್ಷೇತ್ರದ ಎಣಿಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ’ ಎಂದರು.

ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಎಣಿಕೆ ಎರಡು ಕೊಠಡಿಗಳಲ್ಲಿ ನಡೆಯಲಿದೆ. ಬೆಳಿಗ್ಗೆ 7.30ಕ್ಕೆ ವೀಕ್ಷಕರ ಸಮಕ್ಷಮದಲ್ಲಿ ಮತಯಂತ್ರ ರಕ್ಷಣೆಯ ಕೇಂದ್ರ (ಸ್ಟ್ರಾಂಗ್ ರೂಂ) ತೆರೆಯಲಾಗುವುದು. ಹೊರ ರಾಜ್ಯದ ನಾಲ್ಕು ಮಂದಿ ವೀಕ್ಷಕರಾಗಿದ್ದಾರೆ. ಈ ನಾಲ್ಕು ಮಂದಿ ತಲಾ ಎರಡು ವಿಧಾನ ಸಭಾ ಕ್ಷೇತ್ರಗಳ ಎಣಿಕೆಯ ಮೇಲ್ವಿಚಾರಣೆ ನಡೆಸುವರು. ಅವರ ಸಮಕ್ಷಮದಲ್ಲಿಯೇ ಎಲ್ಲ ಕಾರ್ಯಗಳು ಜರುಗುತ್ತವೆ ಎಂದು ವಿವರಿಸಿದರು.

ADVERTISEMENT

ಒಟ್ಟು 111 ಮತ ಎಣಿಕೆಯ ಟೇಬಲ್‌ಗಳು ಇರಲಿವೆ. ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು, ಎಣಿಕೆ ಸಹಾಯಕ ಮತ್ತು ಮೈಕ್ರೋ ಅಬ್ಸರ್ವರ್‌ ನೇಮಕ ಮಾಡಲಾಗಿದೆ. ಒಟ್ಟು 5,500 ಅಂಚೆ ಮತಗಳನ್ನು ನೀಡಲಾಗಿದೆ. ಇಲ್ಲಿಯವರೆಗೂ (ಮೇ 21ರ ಮಧ್ಯಾಹ್ನ) 3,500 ಅಂಚೆ ಮತಗಳು ಬಂದಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಅಂಚೆ ಮತಗಳ ಎಣಿಕೆಗೆ ನಾಲ್ಕು ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಅಭ್ಯರ್ಥಿಗಳು ಮತ್ತು ಏಜೆಂಟರಿಗೆ ಮಾತ್ರ ಮೊಬೈಲ್ ಬಳಕೆಗೆ ಅವಕಾಶ ಇದೆ. ಒಂದು ವೇಳೆ ವಿಜೇತ ಅಭ್ಯರ್ಥಿ ವಿಜಯೋತ್ಸವ ಆಚರಿಸಿದರೆ ಅದನ್ನು ಅವರ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಹೇಳಿದರು.

ಒಂದು ಸುತ್ತಿನ ಮತ ಎಣಿಕೆಗೆ ಕನಿಷ್ಠ 15ರಿಂದ ಗರಿಷ್ಠ 20 ನಿಮಿಷ ಆಗಬಹುದು. ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಯ ವಿವಿ ಪ್ಯಾಟ್‌ ಎಣಿಕೆಯೂ ನಡೆಯಲಿದೆ ಎಂದರು.

ಮೊಬೈಲ್, ಕ್ಯಾಮೆರಾ, ಕ್ಯಾಲಿಕ್ಯುಲೇಟರ್, ಸಿಗರೇಟ್, ಬೀಡಿ, ಮದ್ಯ, ನೀರು, ನೀರಿನ ಬಾಟಲ್, ಇಂಕ್‌ಪೆನ್, ತುಂಬಾಕು ವಸ್ತು ಹಾಗೂ ಯಾವುದೇ ರೀತಿಯ ಆಯುಧಗಳನ್ನು ಎಣಿಕೆ ಕೇಂದ್ರದ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. 23ರಂದು ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾ ರಾಣಿ, ‘ಏಳು ಮಂದಿ ಡಿವೈಎಸ್‌ಪಿ, 12 ಮಂದಿ ಸಿಪಿಐ, 28 ಪಿಎಸ್‌ಐ, 47 ಎಎಸ್‌ಐ ಸೇರಿಂದತೆ 600 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಲಾಗಿದೆ. ಎಲ್ಲೆಡೆ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಗೋಷ್ಠಿಯಲ್ಲಿ ಇದ್ದರು.

ಬಿ.ಎಚ್‌.ರಸ್ತೆಯಲ್ಲಿ ಮಾರ್ಗ ಬದಲಾವಣೆ

ಬೆಂಗಳೂರು ಕಡೆಯಿಂದ ಬರುವ ಬಸ್‌, ಕಾರು ಮತ್ತಿತರ ವಾಹನಗಳು ಎಸ್‌ಐಟಿ ಬಳಿಯ ಗಂಗೋತ್ರಿ ರಸ್ತೆಯಲ್ಲಿ ತಿರುವು ಪಡೆದು ಎಸ್‌ಎಸ್‌ ಪುರಂ ಮೂಲಕ ಭದ್ರಮ್ಮ ಕಲ್ಯಾಣ ಮಂಟಪದ ಬಳಿ ಬಿ.ಎಚ್‌.ರಸ್ತೆ ಸೇರಬೇಕು. ಬಸ್‌ನಿಲ್ದಾಣದ ಕಡೆಯಿಂದ ಬರುವ ವಾಹನಗಳು ಕೋತಿ ತೋಪು ಮಾರ್ಗವಾಗಿ ಎಂ.ಜಿ.ರಸ್ತೆ ಮೂಲಕ ಹಾದು ಹನುಮಂತ ಪುರದ ಮೂಲಕ ಹೆದ್ದಾರಿಗೆ ಸೇರಲು ವ್ಯವಸ್ಥೆ ಮಾಡಲಾಗಿದೆ.

ಈ ಹಿಂದಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿಯೂ ಇದೇ ರೀತಿ ಮಾರ್ಗ ಬದಲಾವಣೆ ಮಾಡಲಾಗಿತ್ತು. ವಾಹನ ನಿಲುಗಡೆಗೆ ಕುವೆಂಪು ಸರ್ಕಲ್‌ ಕಡೆಯಿಂದ ಜಿಪಿಟಿ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಇಲ್ಲಿ ವಾಹನಗಳು ಭರ್ತಿಯಾದರೆ ಕೋತಿ ತೋಪಿನಲ್ಲಿ ನಿಲ್ಲಿಸಬಹುದು.

ಕ್ಷೇತ್ರ ಮತ ಎಣಿಕೆ ಟೇಬಲ್‌ಗಳ ಸಂಖ್ಯೆ ಎಣಿಕೆಯ ಸುತ್ತುಗಳು

ಚಿಕ್ಕನಾಯಕನಹಳ್ಳಿ 14 19
ತಿಪಟೂರು 14 17
ತುರುವೇಕೆರೆ 14 17
ಮಧುಗಿರಿ 14 18
ತುಮಕೂರು ನಗರ 14 19
ತುಮಕೂರು ಗ್ರಾಮಾಂತರ 14 17
ಕೊರಟಗೆರೆ 13 19
ಗುಬ್ಬಿ 14 16

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.