ADVERTISEMENT

ಮತ ಎಣಿಕೆ; ಸುತ್ತೋಲೆ ಮನನ ಮಾಡಿಕೊಳ್ಳಿ

ಮತ ಎಣಿಕೆ ಕುರಿತ ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:30 IST
Last Updated 25 ಏಪ್ರಿಲ್ 2019, 20:30 IST
ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮಾತನಾಡಿದರು. ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ಇದ್ದರು
ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮಾತನಾಡಿದರು. ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ಇದ್ದರು   

ತುಮಕೂರು: ಮೇ 23ರಂದು ನಡೆಯುವ ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ಗುರುವಾರ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ‘ಮತ ಎಣಿಕೆಗೆ ಸಂಬಂಧಿಸಿದಂತೆ ಈಗಾಗಲೇ ಭಾರತ ಚುನಾವಣಾ ಆಯೋಗ ಸುತ್ತೋಲೆಗಳನ್ನು ಹೊರಡಿಸಿದ್ದು, ಸುತ್ತೋಲೆಗಳಲ್ಲಿರುವ ಮಾರ್ಗಸೂಚಿಗಳನ್ವಯ ಎಣಿಕೆ ಕಾರ್ಯವನ್ನು ನಡೆಸಬೇಕಿದೆ. ಸುತ್ತೋಲೆಗಳನ್ನು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ಚೆನ್ನಾಗಿ ಓದಿ ಮನನ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ಮತ ಎಣಿಕೆಯ ಸಂಬಂಧ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಕೌಂಟಿಂಗ್ ಸಿಬ್ಬಂದಿಗಳಿಗೆ 2 ಬಾರಿ ತರಬೇತಿಯನ್ನು ನೀಡಲಿದ್ದೇವೆ. ಮತ ಎಣಿಕೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಒದಗಿಸಲಾಗುವುದು. ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳಿಗೆ ಆಯಾ ಕ್ಷೇತ್ರಗಳ ಮತ ಎಣಿಕೆ ಕಾರ್ಯದ ಜವಾಬ್ದಾರಿಯಾಗಿರುತ್ತದೆ ಎಂದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ‘ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್‌ಗಳನ್ನು ಮಾಡಲು ಆಯೋಗದ ಸೂಚನೆ ಇದೆ. ಅದರಂತೆ ಪ್ರತಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆಗೆ 14 ಎಣಿಕೆ ಮೇಲ್ವಿಚಾರಕರು (ಕೌಂಟಿಂಗ್ ಸೂಪರ್‌ವೈಸರ್), 14 ಎಣಿಕೆ ಸಹಾಯಕರು (ಕೌಂಟಿಂಗ್ ಅಸಿಸ್ಟೆಂಟ್) ಹಾಗೂ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಬೇಕಾಗಿದೆ. ಇವರಿಗೆಲ್ಲಾ ತರಬೇತಿಯನ್ನು ನೀಡಲಾಗುವುದು. ಮತ ಯಂತ್ರಗಳನ್ನು ಇಟ್ಟಿರುವ ಕೊಠಡಿಯ (ಸ್ಟ್ರಾಂಗ್ ರೂಮ್) ಪಕ್ಕದಲ್ಲಿಯೇ ಎಣಿಕೆ ಕೇಂದ್ರವನ್ನು ಮಾಡಲಾಗಿದೆ’ ಎಂದರು.

ಮತ ಎಣಿಕೆ ಸಂಬಂಧ ಚುನಾವಣಾ ಆಯೋಗ ನೀಡಿರುವ ಸುತ್ತೋಲೆಗಳನ್ವಯ ಕಾರ್ಯ ನಿರ್ವಹಿಸಬೇಕು. ಎಣಿಕೆ ಸಮಯದಲ್ಲಿ ನಿರ್ವಹಿಸಬೇಕಾದ ಕ್ರಮಗಳು ಮತ್ತು ಮತ ಎಣಿಕೆಗೆ ಅಗತ್ಯವಿರುವ ಸಿದ್ಧತೆಗಳ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳಿಗೆ ತಹಶೀಲ್ದಾರ್‌ಗಳಿಗೆ ಹಾಗೂ ನೋಡೆಲ್ ಅಧಿಕಾರಿಗಳಿಗೆ ವಿವರಿಸಿದರು.

ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್, ತಿಪಟೂರು ವಿಭಾಗಾಧಿಕಾರಿ ಪೂವಿತಾ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಕೌಂಟಿಂಗ್ ನೋಡೆಲ್ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.