ADVERTISEMENT

ಮೌಲ್ಯಮಾಪನ ಭತ್ಯೆ: ಕಾರಣ ನೀಡಿದ ತುಮಕೂರು ವಿ.ವಿ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:31 IST
Last Updated 23 ಮೇ 2023, 14:31 IST
ತುಮಕೂರು ವಿವಿ
ತುಮಕೂರು ವಿವಿ   

ತುಮಕೂರು: ಉನ್ನತ ಶಿಕ್ಷಣ ಇಲಾಖೆ ಆದೇಶ ಹಾಗೂ ಸಿಂಡಿಕೇಟ್ ಸಭೆಯಲ್ಲಿ ನಿಗದಿಪಡಿಸಿದ ಭತ್ಯೆ ಮೊತ್ತದಲ್ಲಿ ವ್ಯತ್ಯಾಸ ಆಗಿದ್ದರಿಂದ ಎರಡು ಸೆಮಿಸ್ಟರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಅಧ್ಯಾಪಕರಿಗೆ ಭತ್ಯೆ ಪಾವತಿ ವಿಳಂಬವಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಸಚಿವ (ಮೌಲ್ಯಮಾಪನ) ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ಇಲಾಖೆಯಿಂದ ಸೂಕ್ತ ನಿರ್ದೇಶನ ಪಡೆದು ನಂತರ ಭತ್ಯೆ ಪಾವತಿಗೆ ಕ್ರಮ ವಹಿಸಲಾಗುವುದು. ಎರಡು ವರ್ಷಗಳಿಂದ ಭತ್ಯೆ ಬಾಕಿ ಉಳಿಸಿಕೊಂಡಿಲ್ಲ. ಈಗಾಗಲೇ ಸ್ನಾತಕೋತ್ತರ ಪದವಿ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದ್ದು, ಸೋಮವಾರದಿಂದ ಪದವಿ ಮೌಲ್ಯಮಾಪನ ಆರಂಭಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

2020-21ನೇ ಸಾಲಿನ ಪದವಿ ಪ್ರಮಾಣ ಪತ್ರಗಳನ್ನು ವಿವಿಧ ಕಾಲೇಜು, ಸ್ನಾತಕೋತ್ತರ ವಿಭಾಗಗಳಿಗೆ ಈಗಾಗಲೇ ವಿತರಿಸಲಾಗಿದೆ. 2021-22ನೇ ಸಾಲಿನ ಘಟಿಕೋತ್ಸವ ಪದವಿ ಪ್ರಮಾಣ ಪತ್ರಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ವರ್ಷದ ಘಟಿಕೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ಯುಯುಸಿಎಂಎಸ್ ತಂತ್ರಾಂಶದ ಅಳವಡಿಕೆ, ಹೊಸ ಶಿಕ್ಷಣ ನೀತಿ (ಎನ್‍ಇಪಿ) ಶೈಕ್ಷಣಿಕ ವೇಳಾಪಟ್ಟಿಯನ್ನು ಸಿಬಿಸಿಎಸ್ ಪಠ್ಯ ಕ್ರಮದೊಂದಿಗೆ ಸರಿದೂಗಿಸಿಕೊಳ್ಳಬೇಕಾಗಿದೆ. ನಿಗದಿತ ಸಮಯದಲ್ಲಿ ಫಲಿತಾಂಶ ನೀಡಿ, ಘಟಿಕೋತ್ಸವ ಪ್ರಮಾಣ ಪತ್ರ, ರ‍್ಯಾಂಕ್ ಪ್ರಮಾಣ ಪತ್ರಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ನಂತರ ಘಟಿಕೋತ್ಸವ ಮಾಡಲಾಗುತ್ತದೆ. ಹೊಸ ವ್ಯವಸ್ಥೆಯಿಂದಾಗಿ ನಮಗಷ್ಟೇ ಅಲ್ಲ, ರಾಜ್ಯದ ಎಲ್ಲಾ ವಿ.ವಿಗಳಿಗೂ ಅಡಚಣೆಯಾಗಿದೆ ಎಂದಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಆದೇಶದಂತೆ ಕ್ರೀಡಾ ಶುಲ್ಕ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸಿದರೂ ಸರ್ಕಾರದ ಕಡೆಯಿಂದ ಮರು ಪಾವತಿಯಾಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.