ADVERTISEMENT

ಖಾತೆ ಮಾಡಿಕೊಡಲು ವಿಳಂಬ: ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 3:12 IST
Last Updated 7 ಏಪ್ರಿಲ್ 2021, 3:12 IST
ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಖಾತೆ ಮಾಡಿಕೊಡಲು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು
ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಖಾತೆ ಮಾಡಿಕೊಡಲು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು   

ಪಾವಗಡ: ತಾಲ್ಲೂಕಿನಾದ್ಯಂತ ಸರ್ಕಾರದಿಂದ ಮಂಜೂರಾದ ನಿವೇಶನಗಳ ಖಾತೆ ಮಾಡಿಕೊಡದೆ ಗ್ರಾಮ ಪಂಚಾಯಿತಿಗಳಲ್ಲಿ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಬಡ ಜನತೆಗೆ ಸರ್ಕರ ಮಂಜೂರು ಮಾಡಿರುವ ನಿವೇಶನಗಳ ಖಾತೆ ಮಾಡಿಕೊಡದೆ ನೋಂದಣಿ ಮಾಡಿಸಿ
ಕೊಂಡು ಬರುವುದು ಕಡ್ಡಾಯ ಎಂದು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಇದರಿಂದ ಬಡ ಜನತೆ ಮನೆ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಪ್ರತಿಭಟನನಿರತರು ಆರೋಪಿಸಿದರು.

ಗೊಲ್ಲ ಸಮುದಾಯದವರಿಗೆ ಹಟ್ಟಿಗಳಲ್ಲಿ ದಾನ ನೀಡಲಾಗಿರುವ, ಸರ್ಕಾರದಿಂದ ಮಂಜೂರಾಗಿರುವ ನಿವೇಶನಗಳ ಖಾತೆ ಮಾಡಿಕೊಡುತ್ತಿಲ್ಲ. ಮಂಜೂರಾತಿ ಪತ್ರಗಳನ್ನು ವಿತರಿಸುತ್ತಿಲ್ಲ. ನಾನಾ ಕಾರಣಗಳನ್ನು ಹೇಳಿ ವಿಳಂಬ ಮಾಡಲಾಗುತ್ತಿದೆ. ಹೀಗಾಗಿ ಗುಡಿಸಲುಗಳಲ್ಲಿಯೇ ವಾಸಿಸುವಂತಾಗಿದೆ ಎಂದು ದೂರಿದರು.

ADVERTISEMENT

ಈ ಕೂಡಲೆ ಎಲ್ಲ ಸಮುದಾಯದ ಬಡ ಜನತೆ ನಿವೇಶನಗಳ ಖಾತೆ ಮಾಡಿಕೊಡಬೇಕು. ಮಂಜೂರಾತಿ ಪತ್ರ ನೀಡಬೇಕು. ಬಾಕಿ ಇರುವ ಕಂದಾಯ ವಜಾ ಮಾಡಬೇಕು. ವಿದ್ಯುತ್ ಇಲ್ಲದ ಮನೆಗಳಿಗೆ ಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಕೆ.ಆರ್.ನಾಗರಾಜು ಅವರಿಗೆ ಮನವಿ ಪತ್ರ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ನಾರಾಯಣಪ್ಪ, ಪುಲಿಯಪ್ಪ, ಪೆದ್ದಪ್ಪ, ಚೆನ್ನಗಿರಿಯಪ್ಪ, ಗುಡಿಲ್ಲಪ್ಪ, ಅಂಜಿನಪ್ಪ, ಸದಾಶಿವಪ್ಪ, ಶ್ರೀನಿವಾಸ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.