ADVERTISEMENT

ಚಂದ್ರಮೌಳೇಶ್ವರ ಹತ್ಯೆ; ಸಮಗ್ರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 14:43 IST
Last Updated 12 ಜುಲೈ 2020, 14:43 IST
   

ತುಮಕೂರು: ಬಂಗಾರಪೇಟೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಜಿಲ್ಲಾ ಯಾದವ (ಗೊಲ್ಲರ) ಸಂಘ ಹಾಗೂ ಜಿಲ್ಲಾ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿವೆ.

ಚಂದ್ರಮೌಳೇಶ್ವರ ಸರಳ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪೊಲೀಸರು ಇದ್ದರೂ ಅವರ ಸಮ್ಮುಖದಲ್ಲಿಯೇ ಕೊಲೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುವ ಅಗತ್ಯವಿದೆ ಎಂದು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಜಿಲ್ಲಾ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪಾಪಣ್ಣ, ಉಪಾಧ್ಯಕ್ಷ ಸಿ.ರಾಜಣ್ಣ ಆಗ್ರಹಿಸಿದ್ದಾರೆ.

ಬಹಳಷ್ಟು ಜನ ಅಧಿಕಾರಿಗಳು ಸ್ಥಳಕ್ಕೆ ತೆರಳುವುದೇ ಇಲ್ಲ. ಆದರೆ ಚಂದ್ರಮೌಳೇಶ್ವರ ಅವರು ವಸ್ತುಸ್ಥಿತಿ ತಿಳಿಯಲು ಸ್ಥಳಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ಇವರ ಮೇಲೆಯೇ ಏಕೆ ಅವರು ದಾಳಿ ನಡೆಯಿತು. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಅಧಿಕಾರ ರಹಿತ ಹಿಂದುಳಿದವರ ಮೇಲೆ ಅಲ್ಲಲ್ಲಿ ದಬ್ಬಾಳಿಕೆಗಳು ನಡೆಯುತ್ತಲೆ ಇವೆ. ವರ್ಗಾವಣೆಗಳು ಆಗುತ್ತಿವೆ. ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಅಂದರೆ ಅಂತಹ ಅಧಿಕಾರಿಗಳು ಸುಸೂತ್ರವಾಗಿ ಕೆಲಸ ಮಾಡುವುದಾದರೂ ಹೇಗೆ? ಸರ್ಕಾರ ಕೂಡಲೇ ಚಂದ್ರಮೌಳೇಶ್ವರ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.