
ತುಮಕೂರು: ಬೆಳೆ ನಷ್ಟ ಪರಿಹಾರ ವಿತರಣೆ, ಬೆಂಬಲ ಬೆಲೆ ನಿಗದಿ, ಖರೀದಿ ಕೇಂದ್ರ ಆರಂಭ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಅಖಿಲ ಭಾರತ ಕಿಸಾನ್ ಸಭಾದಿಂದ (ಎಐಕೆಎಸ್) ಪ್ರತಿಭಟನೆ ನಡೆಯಿತು.
‘ರಾಜ್ಯದ ವಿವಿಧೆಡೆ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿದೆ. ಸರ್ಕಾರ ನಿರ್ಲಕ್ಷ್ಯ ಬಿಟ್ಟು ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ವಿತರಿಸಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಖರೀದಿ ಕೇಂದ್ರ ತೆರೆಯಬೇಕು’ ಎಂದು ಎಐಕೆಎಸ್ ರಾಜ್ಯ ಉಪಾಧ್ಯಕ್ಷ ಕಂಬೇಗೌಡ ಒತ್ತಾಯಿಸಿದರು.
ಲಕ್ಷಾಂತರ ಬಗರ್ ಹುಕುಂ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ರೈತರು ಸಾಗುವಳಿ ಚೀಟಿಗಾಗಿ ಪರದಾಡುತ್ತಿದ್ದಾರೆ. ಬಗರ್ ಹುಕುಂ ಅರ್ಜಿ ವಿಲೇವಾರಿ ಸಮಿತಿ ರಚಿಸದೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸ್ವಾಧೀನ ಪಡಿಸಿಕೊಂಡ ಭೂಮಿ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಮುಖಂಡರಾದ ಗಿರೀಶ್, ಈರದಾಸಪ್ಪ, ಗುರುಸಿದ್ದಪ್ಪ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.