ADVERTISEMENT

ಗುಬ್ಬಿ: ಒಣ ರಾಗಿ ಹುಲ್ಲಿಗೆ ಹೆಚ್ಚುತ್ತಿದೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:52 IST
Last Updated 23 ಡಿಸೆಂಬರ್ 2025, 6:52 IST
ಗುಬ್ಬಿ ತಾಲ್ಲೂಕಿನಲ್ಲಿ ರಾಸುಗಳ ಮೇವಿಗಾಗಿ ರಾಗಿ ಹುಲ್ಲಿನ ಸಂಗ್ರಹಕ್ಕೆ ಮುಂದಾಗಿರುವ ರೈತರು
ಗುಬ್ಬಿ ತಾಲ್ಲೂಕಿನಲ್ಲಿ ರಾಸುಗಳ ಮೇವಿಗಾಗಿ ರಾಗಿ ಹುಲ್ಲಿನ ಸಂಗ್ರಹಕ್ಕೆ ಮುಂದಾಗಿರುವ ರೈತರು   

ಗುಬ್ಬಿ: ತಾಲ್ಲೂಕಿನಲ್ಲಿ ಈ ಬಾರಿ ರಾಗಿ ಫಸಲು ಕಟಾವನ್ನು ಯಂತ್ರಗಳಿಂದಲೇ ಮಾಡಿಸಿ ಯಂತ್ರಗಳಿಂದಲೇ ಪೆಂಡಿ (ಹೊರೆ )ಕಟ್ಟಲು ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ ರೈತರು ಅಡಿಕೆ ತೆಂಗಿನ ಬೆಳೆಗಳತ್ತ ಹೆಚ್ಚು ಗಮನಹರಿಸುತ್ತಿದ್ದು, ರಾಗಿ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದರೂ ಹೈನುಗಾರಿಕೆ ಅವಲಂಬಿಸಿರುವ ರೈತರು ಬೇಸಿಗೆಯಲ್ಲಿ ರಾಸುಗಳ ಮೇವಿಗಾಗಿ ರಾಗಿಹುಲ್ಲನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಇದರಿಂದಾಗಿ ರಾಗಿ ಹುಲ್ಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಒಂದು ಪೆಂಡಿ ಹುಲ್ಲಿಗೆ ₹250 ರಿಂದ ₹300 ವರೆಗೆ ಮಾರಾಟವಾಗುತ್ತಿದೆ.

ಬೇಸಿಗೆಯಲ್ಲಿ ರಾಸುಗಳ ಮೇವಿಗೆ ಒಣ ಹುಲ್ಲು ಅನುಕೂಲ ಆಗುವುದರಿಂದ ರೈತರು ರಾಗಿಗಿಂತ ಹೆಚ್ಚಾಗಿ ಹುಲ್ಲಿನ ಸಂಗ್ರಹಕ್ಕೆ ಆಸಕ್ತಿ ತೋರುತ್ತಿದ್ದಾರೆ. ನೀರಾವರಿ ಅನುಕೂಲ ಇರುವವರು ಹಸಿ ಮೇವು ಬೆಳೆದುಕೊಳ್ಳಬಹುದಾದರೂ ವಿದ್ಯುತ್ ಅಭಾವ ಉಂಟಾಗಿ ಮೇವಿಗೆ ತೊಂದರೆ ಆಗುವುದು ಎಂಬ ಕಾರಣಕ್ಕಾಗಿ ರಾಗಿ ಹುಲ್ಲನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ರಾಗಿ ಬೆಳೆಯನ್ನು ಕಟಾವು ಮಾಡಿರುವ ಸ್ಥಳೀಯ ಅಗತ್ಯ ಇರುವ ರೈತರು ಹುಲ್ಲನ್ನು ಅವರೇ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ಅಗತ್ಯ ಇಲ್ಲದವರು ಈಗಾಗಲೇ ಬಹುಪಾಲು ಮಾರಿ ಕೊಂಡಿದ್ದಾರೆ. ಮೇವಿನ ಅಗತ್ಯ ಇರುವವರು ರಾಗಿ ಬೆಳೆಯನ್ನು ಕಟಾವು ಮಾಡುವುದಕ್ಕಿಂತ ಮುಂಚೆಯೇ ಮುಂಗಡ ಹಣವನ್ನು ಕೊಟ್ಟು ಹುಲ್ಲನ್ನು ಕಾಯ್ದಿರಿಸಿದ್ದಾರೆ. ಹಲವರು ಕಟಾವು ಮಾಡಲು ಹಣ ನೀಡಿ ರಾಗಿಯನ್ನು ಬೆಳೆದವರಿಗೆ ಕೊಟ್ಟು ಹುಲ್ಲನ್ನು ಕೊಂಡೊಯ್ಯುತ್ತಿದ್ದಾರೆ.

ರಾಗಿ ಹುಲ್ಲಿನ ಜೊತೆಗೆ ಭತ್ತದ ಹುಲ್ಲಿನ ಅಗತ್ಯ ಇರುವವರು ಹೊರ ಜಿಲ್ಲೆಗಳಿಗೆ ಹೋಗಿ ಲಾರಿಗಳಲ್ಲಿ ಅಪಾರ ಪ್ರಮಾಣದಲ್ಲಿ ತಂದು ಸ್ಥಳೀಯವಾಗಿ ಹಂಚಿಕೊಳ್ಳುತ್ತಿದ್ದಾರೆ. ಬೇರೆ ಕಡೆಯಿಂದ ಹುಲ್ಲನ್ನು ತಂದು ಮಾರಲು ಹಲವು ದಲ್ಲಾಳಿಗಳು ಮುಂದಾಗಿದ್ದಾರೆ.

ಕೂಲಿಯಾಳುಗಳ ಮೂಲಕ ಕೊಯ್ಲು ಮಾಡುವವರು ಕೈಯಿಂದಲೇ ಪೆಂಡಿಗಳನ್ನು ಕಟ್ಟಿದರೆ, ಯಂತ್ರದಲ್ಲಿ ಕಟಾವು ಮಾಡುವವರು ಯಂತ್ರಗಳಿಂದಲೇ ಪೆಂಡಿಗಳನ್ನು ಕಟ್ಟಿ ಮಾರಾಟ ಮಾಡುತ್ತಿದ್ದಾರೆ. ಹಸಿ ಮೇವಿಗಿಂತ ಹೆಚ್ಚಾಗಿ ಒಣ ಮೇವನ್ನು ದೀರ್ಘಕಾಲದವರೆಗೆ ಸಂಗ್ರಹಿ ಸಾಧ್ಯವಿರುವುದರಿಂದ ಒಣಮೇವಿನ ಸಂಗ್ರಹಕ್ಕೆ ರೈತರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಹೈನುಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಂಡಿರುವ ನಾವು ರಾಸುಗಳಿಗೆ ಮೇವನ್ನು ಹೊಂದಿಸಲೇಬೇಕು. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಿ ರಾಗಿ ಹುಲ್ಲಿನ ಸಂಗ್ರಹಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಗ್ರಾಮೀಣ ಭಾಗದ ರೈತರು.

ಈ ಮೊದಲೆಲ್ಲ ಕಣದ ಸುಗ್ಗಿ ಮುಗಿದ ನಂತರ ಹುಲ್ಲಿನ ಸಂಗ್ರಹಕ್ಕೆ ಮುಂದಾಗುತ್ತಿದ್ದೆವು. ಆದರೆ ಬದಲಾದ ಸನ್ನಿವೇಶದಲ್ಲಿ ಯಂತ್ರಗಳಿಂದಲೇ ಕಟಾವು ಮಾಡಿ ಪೆಂಡಿ ಕಟ್ಟುತ್ತಿರುವುದರಿಂದ ಮೇವು ಸಿಗುವ ಸಂದರ್ಭದಲ್ಲಿ ಸಂಗ್ರಹಿಸಿಕೊಳ್ಳುತ್ತಿದ್ದೇವೆ. ಇಲ್ಲವಾದಲ್ಲಿ ಬೇಸಿಗೆಯಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ರೈತ ಗಂಗಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.