ತುಮಕೂರು: ಸಕಾಲಕ್ಕೆ ಗೌರವ ಸಂಭಾವನೆ ನೀಡುವಂತೆ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಒತ್ತಾಯಿಸಿದ್ದಾರೆ.
ವಿ.ವಿ ಕುಲಪತಿಗೆ 50ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದ್ದು, ಮಾಸಿಕ ಗೌರವ ಸಂಭಾವನೆಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಭಾವನೆ ನೀಡುವುದು ತಡವಾಗುತ್ತಿದೆ. ಪ್ರತಿ ತಿಂಗಳು 15ನೇ ತಾರೀಖಿನ ಆಸುಪಾಸಿನಲ್ಲಿ ನೀಡಲಾಗುತ್ತಿತ್ತು. ಈಗ ತಡವಾಗುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಸಾಲದ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು 10ನೇ ತಾರೀಖಿನ ಒಳಗೆ ವೇತನ ನೀಡುವಂತೆ ಕೇಳಿಕೊಂಡಿದ್ದಾರೆ.
‘ಬಜೆಟ್ ಮಂಡನೆ ತಡವಾಗಿದ್ದು, ವೇತನ ನೀಡಲು ಸಾಧ್ಯವಾಗಿಲ್ಲ. ಮಾರ್ಚ್ ತಿಂಗಳ ವೇತನ ನೀಡುವುದು ಬಾಕಿ ಇದೆ. ಈ ವಾರ ಬಜೆಟ್ ಮಂಡನೆಯಾಗಲಿದ್ದು, ನಂತರ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.