ಕುಣಿಗಲ್: ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿರುವ ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ತಾಲ್ಲೂಕಿನ ನೂರಾರು ಕಾಂಗ್ರೆಸ್ ಮುಖಂಡರು ಶುಕ್ರವಾರ ರಾಜ್ಯ ಹೆದ್ದಾರಿ 33ರ ಕುರುಡಿಹಳ್ಳಿ ಹೇಮಾವತಿ ನಾಲಾ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ ಮಾತನಾಡಿ, ತಾಲ್ಲೂಕಿನ ಜನರ ಹೋರಾಟ ಯಾರ ವಿರುದ್ಧವೂ ಅಲ್ಲ. ತಾಲ್ಲೂಕಿನ ಪಾಲಿನ ನೀರನ್ನು ನೇರವಾಗಿ ಹರಿಸಿಕೊಳ್ಳಲು ಮಾತ್ರ. ತುಮಕೂರು ಜಿಲ್ಲೆಗೆ ಹೇಮಾವತಿ ನೀರಿಗಾಗಿ ನಾಲಾ ಯೋಜನೆಗೆ ತಾಲ್ಲೂಕಿನ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ಸೇರಿದಂತೆ ಜನಪ್ರತಿನಿಧಿಗಳು ಹೋರಾಟದ ಸಮಯದಲ್ಲಿ ತುಮಕೂರು ಜಿಲ್ಲೆಯ ರಾಜಕೀಯ ಪಕ್ಷದ ಮುಖಂಡರು ಲೇವಡಿ ಮಾಡಿದ್ದರು. ನೀರು ಹರಿಯುವ ಸಮಯದಲ್ಲಿ ಯೋಜನೆಯ ವ್ಯಾಪ್ತಿಯಲ್ಲಿಲ್ಲದ ತಾಲ್ಲೂಕಿನ ಜನಪ್ರತಿನಿಧಿಗಳು ತಮಗೂ ಹೇಮಾವತಿ ನೀರು ಬೇಕು ಎಂದು ವಾಮಮಾರ್ಗ ಹಿಡಿದು ತೆಗೆದುಕೊಂಡ ಕಾರಣ ತಾಲ್ಲೂಕಿನ ಪಾಲಿನ ನೀರು ಇದುವರೆಗೂ ಹರಿದು ಬಂದಿಲ್ಲ ಎಂದರು.
25 ವರ್ಷದ ಅನ್ಯಾಯ ಸರಿಪಡಿಸಲು ಶಾಸಕ ಡಾ.ರಂಗನಾಥ್, ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತೂ ಸಚಿವ ಡಿ.ಕೆ.ಶಿವಕುಮಾರ್ ನೇರವಾಗಿ ನೀರನ್ನು ಪಡೆಯಲು ಲಿಂಕ್ ಕೆನಾಲ್ ಯೋಜನೆ ಜಾರಿಗೆ ತಂದಿದ್ದಾರೆ. ಇದನ್ನು ಸಹಿಸದ ಜಿಲ್ಲೆ ಇತರೆ ತಾಲ್ಲೂಕಗಳ ಮುಖಂಡರು ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ಉಗ್ರ ಹೋರಾಟ ಮಾಡಿಯಾದರೂ ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸಿ, ತಾಲ್ಲೂಕಿನ ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜೆಸಿಬಿ ರಾಜಣ್ಣ, ವೈ.ಕೆ.ರಾಮಯ್ಯ ನಂತರ ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಹೋರಾಟದ ಹಾದಿ ರೂಪಿಸಿದವರು ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ರಂಗನಾಥ್. ಸರ್ಕಾರದಿಂದ ಮಂಜೂರಾತಿ ಪಡೆದು ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭವಾಗುವ ಸಮಯದಲ್ಲಿ ರಾಜಕೀಯ ದುರುದ್ದೇಶದಿಂದ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಕಾವೇರಿ ಕೊಳ್ಳದ ವ್ಯಾಪ್ತಿಯ ಹೇಮಾವತಿ ನೀರು ಮೂಲ ಯೋಜನೆಯಲ್ಲಿ ಇಲ್ಲದ ಮಧುಗಿರಿ, ಚಿಕ್ಕನಾಯಕನಹಳ್ಳಿ ಮತ್ತು ಶಿರಾ ಕಡೆ ಹೋಗುವ ಸಮಯದಲ್ಲಿ ಯಾವುದೇ ವಿರೋಧ ವ್ಯಕ್ತಪಡಿಸದೆ ಸುಮ್ಮನಿದ್ದ ಮುಖಂಡರು ಲಿಂಕ್ ಕೆನಾಲ್ ಕಾಮಗಾರಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಬೇಗೂರು ರಾಮಣ್ಣ, ಹರೀಶ್, ಶಿವಶಂಕರ್, ಎಸ್.ಆರ್. ಚಿಕ್ಕಣ್ಣ, ಹಾಲುವಾಗಿಲು ಸ್ವಾಮಿ, ಮೋಹನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.