ತುಮಕೂರು: ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಬಿಜೆಪಿ ಮುಖಂಡರು, ವಿವಿಧ ಸಮುದಾಯದ ಪ್ರಮುಖರು ಇಲ್ಲಿ ಶುಕ್ರವಾರ ಒತ್ತಾಯಿಸಿದರು.
ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಮುಖಂಡ ಹೆಬ್ಬಾಕ ಮಲ್ಲಿಕಾರ್ಜುನ್, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್ ಇತರರು ಜಂಟಿ ಸುದ್ದಿಗೋಷ್ಠಿ ನಡೆಸಿ ಶಿವಣ್ಣ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಾರದಿದ್ದ ಕಾಲದಲ್ಲಿ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಎರಡು ಬಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಪಕ್ಷ, ಜನ ಕಷ್ಟದಲ್ಲಿದ್ದಾಗ ಕೈ ಬಿಡದೆ ಬೆಂಬಲವಾಗಿ ನಿಲ್ಲುತ್ತಾರೆ. ಅವರಿಗೆ ಅವಕಾಶ ನೀಡಿದರೆ ಬಿಜೆಪಿಗೆ ದೊಡ್ಡ ಶಕ್ತಿ ಬರುತ್ತದೆ. ಮುಂದಿನ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಸಹಾಯವಾಗುತ್ತದೆ. ಹೇಮಾವತಿ ನೀರು ಜಿಲ್ಲೆಗೆ ಹರಿಯುವಲ್ಲಿ ಶಿವಣ್ಣ ಕೊಡುಗೆ ಮಹತ್ವದ್ದಾಗಿದೆ. ಇದೀಗ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಹೋರಾಟ ಮನೋಭವ ಇರುವವರಿಗೆ ಅವಕಾಶ ಕಲ್ಪಿಸಬೇಕು ಎಂದು ಕೇಳಿಕೊಂಡರು.
ಸ್ನೇಹ ಸಂಗಮ ಸಹಕಾರ ಸಂಘದ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಮುಖಂಡರಾದ ನಂಜುಂಡಪ್ಪ, ಪುರವರ ಮೂರ್ತಿ, ಡೆಲ್ಟಾ ರವಿ, ಪ್ರಭಾಕರ್, ಯಶಸ್, ಏಕಾಂತ್, ಮಹದೇವಯ್ಯ, ರವಿಕುಮಾರ್, ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.