ADVERTISEMENT

ಗುಬ್ಬಿ | ಅರಣ್ಯ ಭೂಮಿ ಉಳಿಸಲು ಆಗ್ರಹ: ಬಿಳೆನಂದಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2024, 4:53 IST
Last Updated 7 ಸೆಪ್ಟೆಂಬರ್ 2024, 4:53 IST
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಡನೆ ಚರ್ಚಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಡನೆ ಚರ್ಚಿಸಿದ ಅರಣ್ಯ ಇಲಾಖೆ ಅಧಿಕಾರಿಗಳು   

ಗುಬ್ಬಿ: ತಾಲ್ಲೂಕಿನ ಗಡಿಭಾಗ ಬಿಳೆನಂದಿ ಅರಣ್ಯ ಪ್ರದೇಶದಲ್ಲಿ ಕೆಲವರು ಅಕ್ರಮವಾಗಿ ಗಿಡಗಳನ್ನು ತೆರೆವುಗೊಳಿಸಿ ಕೃಷಿ ಭೂಮಿಯನ್ನಾಗಿಸಲು ಯತ್ನಿಸುತ್ತಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಶುಕ್ರವಾರ ಬಿಳೆನಂದಿ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಅಕ್ರಮವಾಗಿ ಗಿಡ ಕಡಿಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಗ್ರಾಮ ಗುಬ್ಬಿ ಮತ್ತು ತುರುವೇಕೆರೆ ತಾಲ್ಲೂಕುಗಳ ಗಡಿಭಾಗದಲ್ಲಿ ಬರುವುದರಿಂದ ಎರಡು ತಾಲ್ಲೂಕುಗಳ ಅಧಿಕಾರಿಗಳು ಒಬ್ಬರ ಮೇಲೆ ಮತ್ತೊಬ್ಬರು ದೂರುತ್ತ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಭೂಗಳ್ಳರು ಅರಣ್ಯ ಪ್ರದೇಶಕ್ಕೆ ಕನ್ನ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕರೆ ಮಾಡಿದಾಗ ನೆಪಮಾತ್ರಕ್ಕೆ ಬಂದು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಗ್ರಾಮದ ಸಮೀಪವೇ ಇರುವ ಅರಣ್ಯಗಳಲ್ಲಿ ಗಿಡ ತೆರವಿಗಾಗಿ ಭೂಗಳ್ಳರು ರಾತ್ರಿ ಜೆಸಿಬಿ ಯಂತ್ರಗಳನ್ನು ತರುತ್ತಾರೆ. ಭಯದಿಂದಾಗಿ ಗ್ರಾಮಸ್ಥರು ಸಮೀಪ ಹೋಗಲು ಹಿಂಜರಿಯುವಂತಾಗಿದೆ. ಅರಣ್ಯ ಅಧಿಕಾರಿಗಳು ಮುಂದೆ ಬಂದಲ್ಲಿ ಗ್ರಾಮಸ್ಥರು ಅವರಿಗೆ ಬೆನ್ನೆಲುಬಾಗಿ ನಿಲ್ಲುವೆವು’ ಎಂದು ಹೇಳಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಮುಂದುವರೆಸುವೆವು ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದರು. ಗುಬ್ಬಿ ಮತ್ತು ತುರುವೇಕೆರೆ ತಾಲ್ಲೂಕು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಕ್ರಮ ಕೈಕೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಅರಣ್ಯಾಧಿಕಾರಿಗೆ ಗ್ರಾಮಸ್ಥರು ಕರೆ ಮಾಡಿದಾಗ, ಗಿಡ ತೆರವುಗೊಳಿಸಿರುವ ಜಾಗದಲ್ಲಿ ನಾಳೆಯಿಂದ ಹೊಸದಾಗಿ ಗಿಡ ನೆಡುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಂದಾಯ ಇಲಾಖೆಗೆ ಸೇರಿದ ಗೋಮಾಳವೂ ಇದೆ. ಸದರಿ ಜಾಗವನ್ನು ತಹಶೀಲ್ದಾರ್ ಜಂಟಿ ಸರ್ವೆ ಮಾಡಿಸಿ, ಅರಣ್ಯ ಇಲಾಖೆಯ ಸ್ವಾಧೀನಕ್ಕೆ ನೀಡಿದಲ್ಲಿ ಗಿಡಗಳನ್ನು ಬೆಳೆಸಲು ಅನುಕೂಲವಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಅರಣ್ಯ ಪ್ರದೇಶ ಸಂರಕ್ಷಿಸದೆ ಭೂಗಳ್ಳರ ಜೊತೆ ಕೈಜೋಡಿಸಿದ್ದು, ಕಂಡುಬಂದಲ್ಲಿ ಹೋರಾಟ ಮಾಡಲಾಗುವುದು ಎಂದು ಸುತ್ತಲಿನ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.