ADVERTISEMENT

ಡಿ.ಸಿ ವಿರುದ್ಧ ಮುಗಿಬಿದ್ದ ಪ್ರಗತಿಪರರು

ಆದೇಶ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:11 IST
Last Updated 12 ಮೇ 2025, 16:11 IST
   

ತುಮಕೂರು: ಪ್ರತಿಭಟನೆ ನಡೆಸಲು ಅನುಮತಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ವಿರುದ್ಧ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಯಾವ ಕಾನೂನಿನಡಿ ಹೀಗೆ ಆದೇಶಿಸಲಾಗಿದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನಿಯೋಗವು ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಅವರನ್ನು ಭೇಟಿಯಾಗಿ ಕೂಡಲೇ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಿತು.

‘ಜಿಲ್ಲಾಧಿಕಾರಿ ನಡೆ ಸಂವಿಧಾನ ವಿರೋಧಿಯಾಗಿದೆ. ನಿಯಮ ಮೀರಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಈಗಿರುವ ನಿಯಮದ ಸಂಪೂರ್ಣ ಬದಲಾವಣೆಯನ್ನು ಸೂಚಿಸುತ್ತದೆ. ಈ ಬದಲಾವಣೆ ಯಾಕೆ ತರಬೇಕು? ಎಂದು ಪ್ರಗತಿಪರರು ಪ್ರಶ್ನಿಸಿದರು.

ADVERTISEMENT

ಜನರಿಗೆ ನ್ಯಾಯ ಒದಗಿಸಲು ಪ್ರತಿಭಟನೆಗಳು ನೆರವಾಗಿವೆ. ಈ ಹಿಂದೆ ಪ್ರತಿಭಟನೆ ನಡೆಯುವುದಕ್ಕೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಲಾಗುತ್ತಿತ್ತು. ಈ ನಿಯಮದಿಂದ ಈವರೆಗೆ ಯಾವುದೇ ಸಮಸ್ಯೆಯಾಗಿಲ್ಲ. ಇದೀಗ ಪ್ರತಿಭಟನೆ ಹತ್ತಿಕ್ಕುವ ಉದ್ದೇಶದಿಂದ ಆದೇಶ ಹೊರಡಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಸರ್ಕಾರ ವಾಕ್‌ ಸ್ವಾತಂತ್ರ್ಯದ ಹಕ್ಕು ರಕ್ಷಿಸಬೇಕು. ಆದರೆ ಜಿಲ್ಲಾಧಿಕಾರಿಯೇ ಈ ಹಕ್ಕನ್ನು ಹತ್ತಿಕ್ಕುತ್ತಿದ್ದಾರೆ. ಆದೇಶ ಸಂವಿಧಾನದ ಚೌಕಟ್ಟು ಮೀರಿದೆ. ಪ್ರತಿಭಟಿಸುವ ಹಕ್ಕು ಕಿತ್ತುಕೊಂಡು, ಶೋಷಿತ ಸಮುದಾಯಗಳ ಹಕ್ಕಿನ ರಕ್ಷಣೆಗೆ ಧಕ್ಕೆ ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಬಹುದು. ಪ್ರತಿಭಟನೆ, ಧರಣಿ, ಮೆರವಣಿಗೆ ತಡೆಯುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಈ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಸಭೆ ಕರೆಯಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಭರವಸೆ ನೀಡಿದರು.

ನಿಯೋಗದಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಕಂಬೇಗೌಡ, ಪರಿಸರವಾದಿ ಸಿ.ಯತಿರಾಜು, ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಜನ ಸಂಗ್ರಾಮ್‌ ಪರಿಷತ್‍ನ ಪಂಡಿತ್‌ ಜವಹಾರ್, ವಕೀಲ ಕಿಶೋರ್, ಕೆಪಿಆರ್‌ಎಸ್‌ನ ಬಿ.ಉಮೇಶ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಟಿ.ಜಿ.ಶಿವಲಿಂಗಯ್ಯ, ಎನ್.ಕೆ.ಸುಬ್ರಮಣ್ಯ, ಅಶ್ವತ್ಥಯ್ಯ, ಎಂ.ವಿ.ಕಲ್ಯಾಣಿ, ಮಂಜುಳಾ ಗೋನವಾರ, ಅಶ್ವಿನಿ, ತಾಜುದ್ದೀನ್‍ ಷರೀಪ್, ಶಂಕರಪ್ಪ, ಧನಂಜಯಾರಾದ್ಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.