ADVERTISEMENT

ರೈತ ಕಾಯ್ದೆ ವಾಪಸ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 3:00 IST
Last Updated 27 ಜೂನ್ 2021, 3:00 IST
ತುಮಕೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು
ತುಮಕೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು   

ತುಮಕೂರು: ರೈತರು ಕಳೆದ ಆರು ತಿಂಗಳಿನಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳ ವಾಪಸ್‌ಗೆ ಒತ್ತಾಯಿಸಿದೆಹಲಿ ಹೊರ ಭಾಗದಲ್ಲಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ರಸಗೊಬ್ಬರ, ಬಿತ್ತನೆ ಬೀಜಗಳ ಸಮರ್ಪಕ ವಿತರಣೆಗೆ ಆಗ್ರಹಿಸಿದರು. ದೆಹಲಿಯ ರೈತರ ಹೋರಾಟ ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಕೃಷಿ ಕಾಯ್ದೆ ರೈತರಿಗೆ ಮಾರಕವಾಗಿದ್ದು ರದ್ದತಿಗೆ ಕಿಸಾನ್ ಮೋರ್ಚಾ ಕೈಗೆತ್ತಿಕೊಂಡಿರುವ ಪ್ರತಿಭಟನೆಗೆ ಬೆಂಬಲ
ವ್ಯಕ್ತಪಡಿಸಿದರು.

ಕಳೆದ 6 ತಿಂಗಳಿಂದ ರೈತರು ರಾಷ್ಟ್ರ ರಾಜಧಾನಿಯ ನಾಲ್ಕು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಂಡತನದಿಂದ ಪರ್ಯಾಯ ರಸ್ತೆಗಳ ಮೂಲಕ ದೆಹಲಿಗೆ ಬರುವಂತೆ ಮಾಡಿ, ರೈತರ ವಿರುದ್ಧ ಗೆದ್ದಿದ್ದೇವೆ, ಚಳವಳಿ ಹತ್ತಿಕ್ಕಿದ್ದೇವೆ ಎಂದು ಬೀಗುತ್ತಿದ್ದಾರೆ. ಇದು ಪ್ರಧಾನಿಯವರ ಗೆಲುವಲ್ಲ. ಬದಲಾಗಿ ರೈತರ ಗೆಲುವು. ಈಗಾಗಲೇ ಪ್ರಪಂಚದ ವಿವಿಧ ರಾಷ್ಟ್ರಗಳ ಸಂಸತ್ತಿನಲ್ಲಿ ಪ್ರತಿಭಟನಾ ನಿರತ ರೈತರ ಮನವಿ ಆಲಿಸುವಂತೆ ಒತ್ತಡಗಳು ಹೆಚ್ಚಾಗುತ್ತಿವೆ. ಆದರೂ ಜಾಣಕಿವುಡು ಪ್ರದರ್ಶಿಸುವ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸೋಗಲಾಡಿತನಕ್ಕೆ ದೇಶದ
ರೈತರ ಧಿಕ್ಕಾರವಿದೆ ಎಂದು ಕಿಡಿಕಾರಿದರು.

ADVERTISEMENT

ಕೇಂದ್ರದ ಜನವಿರೋಧಿ ಕಾಯ್ದೆಗಳ ಫಲವಾಗಿ ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ರೈತರಿಗೆ, ಕೃಷಿ ಕಾರ್ಮಿಕರಿಗೆ, ದೇಶದ ಬಡವರಿಗೆ ಬೇಡವಾದ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಇದೇ ಪರಿಸ್ಥಿತಿ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಮೋದಿ ಅವರು ಕಳೆದ ಚುನಾವಣೆ ಸಮಯದಲ್ಲಿ 2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂದು ಹೇಳಿದ್ದರು. ಏಕಾಏಕಿ ರಸಗೊಬ್ಬರ, ಬಿತ್ತನೆ ಬೀಜಗಳ ಮೇಲಿನ ಸಬ್ಸಿಡಿ ಕಡಿಮೆ ಮಾಡಿ, ಬೆಲೆ ಹೆಚ್ಚಳವಾಗುವಂತೆ ಮಾಡಿದ್ದಾರೆ. ರೈತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಎನ್ನುವಂತಾಗಿದೆ. ಜತೆಗೆ ಕೃಷಿ ಸಾಲ ಕಡಿತ, ಕಬ್ಬಿನ ಬಾಕಿ ನೀಡದೆ ಮೋಸ ಮಾಡಲಾಗುತ್ತಿದೆ. ಸರ್ಕಾರ ಸ್ಪಂದಿಸದಿದ್ದರೆ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹೇಳಿದರು.

ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್, ಗೌರವಾಧ್ಯಕ್ಷ ಧನಂಜಯಾರಾಧ್ಯ, ಸಂಚಾಲಕ ದೇವರಾಜ ತಿಮ್ಮಲಾಪುರ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಸಿದ್ದರಾಮ, ಅನಿಲ್‍ಕುಮಾರ್, ನಾಗೇಂದ್ರ, ದ್ಯಾಮೇಗೌಡ, ರಾಜಣ್ಣ ಮಾತನಾಡಿದರು. ವಿದ್ಯಾರ್ಥಿ ಘಟಕ ಅಧ್ಯಕ್ಷ ಲಕ್ಷ್ಮಣಗೌಡ, ಮುಖಂಡರಾದ ಶಂಕರಲಿಂಗಪ್ಪ, ಪುಟ್ಟರಾಜು, ಲಕ್ಷ್ಮಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.