ತುಮಕೂರು: ತಾಲ್ಲೂಕಿನ ಬಿದರೆಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ತುಮಕೂರು ವಿಶ್ವವಿದ್ಯಾಲಯದ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ವಿಜ್ಞಾನ ವಿಭಾಗಗಳನ್ನು ಸ್ಥಳಾಂತರಿಸಲು ನಿರ್ಧರಿಸಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ತರಗತಿಗಳು ಆರಂಭವಾಗಲಿವೆ.
ಸ್ನಾತಕೋತ್ತರ ಪದವಿಯ ವಿಜ್ಞಾನ ವಿಭಾಗಗಳು ಈ ವರ್ಷದಿಂದ ಆರಂಭವಾಗಲಿದ್ದು, ‘ಜ್ಞಾನಸಿರಿ’ಯಲ್ಲೇ ಮೊದಲ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆಗಳು ನಡೆಯಲಿವೆ.
ಅ. 10ರಂದು ಮೊದಲ ಹಂತದಲ್ಲಿ ವಿಜ್ಞಾನ ವಿಷಯಗಳಿಗೆ ಪ್ರವೇಶ ನೀಡಲಾಗುತ್ತದೆ. ಅ. 14ರಿಂದ ಪ್ರಥಮ ಸೆಮಿಸ್ಟರ್‌ನ ಸ್ನಾತಕೋತ್ತರ ತರಗತಿಗಳು ಆರಂಭವಾಗಲಿವೆ. ನಂತರ ಸ್ನಾತಕೋತ್ತರ ಪದವಿಯ ವಿಜ್ಞಾನ ವಿಭಾಗಗಳನ್ನು (ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸೆಮಿಸ್ಟರ್) ನಗರದ ವಿ.ವಿ ಕ್ಯಾಂಪಸ್‌ನಿಂದ ‘ಜ್ಞಾನಸಿರಿ’ಗೆ ಸ್ಥಳಾಂತರಿಸಲಾಗುತ್ತದೆ. ಬಹುತೇಕ ಪೂರ್ಣ ಪ್ರಮಾಣದಲ್ಲಿ ವಿಜ್ಞಾನ ವಿಭಾಗಗಳ ತರಗತಿಗಳು ಹೊಸ ಕ್ಯಾಂಪಸ್‌ನಲ್ಲಿ ನಡೆಯಲಿವೆ.
ಆಡಳಿತ ವಿಭಾಗ, ತರಗತಿಗೆ ಬೇಕಾದ ಕಟ್ಟಡ, ಹಾಸ್ಟೆಲ್ ಕಟ್ಟಡದ ಕೆಲಸ ಪೂರ್ಣಗೊಂಡು ಮೂರು ವರ್ಷಗಳೇ ಕಳೆದಿವೆ. ಉದ್ಘಾಟನೆಗೆ ರಾಜ್ಯಪಾಲರನ್ನು ಆಹ್ವಾನಿಸಿದ್ದು, ಅವರಿಂದ ಸಮಯ ಸಿಕ್ಕಿಲ್ಲ. ಇನ್ನೂ ತಡಮಾಡಿದರೆ ಹೊಸ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವುದು ಮತ್ತಷ್ಟು ನಿಧಾನವಾಗುತ್ತದೆ ಎಂಬ ಕಾರಣಕ್ಕೆ ವಿಜ್ಞಾನ ವಿಭಾಗಗಳನ್ನು ಸ್ಥಳಾಂತರಿಸಲಾಗುತ್ತಿದೆ. ಸದ್ಯಕ್ಕೆ ತರಗತಿ ಆರಂಭಿಸಿ, ನಂತರ ಉದ್ಘಾಟಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ ಎನ್ನಲಾಗಿದೆ.
ನಗರದ ಮೆಳೆಕೋಟೆಯಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ನಡೆಯುತ್ತಿದ್ದ ಎಂಸಿಎ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಭಾಗಗಳನ್ನೂ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಿಸಲಾಗುತ್ತಿದೆ.
‘ನಗರ ವಿ.ವಿ ಆವರಣದಲ್ಲಿ ಇರುವ ಕ್ಯಾಂಪಸ್‌ನಲ್ಲಿ ಪ್ರಥಮ ಸೆಮಿಸ್ಟರ್‌ಗೆ ಪ್ರವೇಶ ನೀಡಿ, ತರಗತಿಗಳನ್ನು ಹೊಸ ಕ್ಯಾಂಪಸ್‌ನಲ್ಲಿ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ‘ಜ್ಞಾನಸಿರಿ’ಯಲ್ಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ. ಹಾಸ್ಟೆಲ್ ಆರಂಭ ಒಂದು ತಿಂಗಳು ತಡವಾಗಲಿದೆ’ ಎಂದು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ಹೊಸ ಕ್ಯಾಂಪಸ್‌ಗೆ ಬಸ್ ಸೌಲಭ್ಯ ತಾಲ್ಲೂಕಿನ ಬಿದರೆಕಟ್ಟೆಯಲ್ಲಿ ನಿರ್ಮಿಸಿರುವ ವಿ.ವಿ ನೂತನ ಕ್ಯಾಂಪಸ್‌ಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಿದೆ. ನಗರದಿಂದ 18 ಕಿ.ಮೀ ದೂರವಿದ್ದು ವಿದ್ಯಾರ್ಥಿಗಳು ಬೋಧಕರು ಸಿಬ್ಬಂದಿ ಹೋಗಿ ಬರಲು ಅನುಕೂಲವಾಗುವಂತೆ ನಿಗದಿತ ಸಮಯದಲ್ಲಿ ಬಸ್‌ಗಳು ಸಂಚರಿಸಲಿವೆ. ಬುಧವಾರ ಬಸ್ ಸಂಚಾರಕ್ಕೆ ವಿ.ವಿ ಆವರಣದಲ್ಲಿ ಚಾಲನೆ ನೀಡಲಾಗುತ್ತದೆ. ಅ. 10ರಂದು ನಗರ ಬಸ್ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಬಸ್ ಸಂಚಾರ ಆರಂಭವಾಗಲಿದೆ. ಬೆಳಿಗ್ಗೆ 9 10 11 ಮಧ್ಯಾಹ್ನ 2 3 4 5 6 ಗಂಟೆಗೆ ಸಂಚರಿಸಲಿವೆ. ವಿಶ್ವವಿದ್ಯಾಲಯ ನಗರ ಕ್ಯಾಂಪಸ್‍ನಿಂದ ಬೆಳಿಗ್ಗೆ 8.30 9.30 10.30 11.30 ಮಧ್ಯಾಹ್ನ 2.30 3.30 4.30 5.30 6.30 ಗಂಟೆಗೆ ಸಂಚಾರ ಇರುತ್ತದೆ. ಅ. 14ರಿಂದ ಪ್ರತಿನಿತ್ಯ ನಗರ ಬಸ್ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಬಸ್ ಸಂಚಾರ ಆರಂಭವಾಗಲಿದೆ. ನಂತರ 9 ಗಂಟೆ 10 11 ಮಧ್ಯಾಹ್ನ 12 1 2 3 4 5 6 ಗಂಟೆಗೆ ಸಂಚರಿಸಲಿವೆ. ವಿ.ವಿ ನಗರ ಕ್ಯಾಂಪಸ್‍ನಿಂದ ಬೆಳಿಗ್ಗೆ 8.30 9.30 10.30 11.30 ಮಧ್ಯಾಹ್ನ 12.30 1.30 2.30 3.30 4.30 5.30 6.30 ಗಂಟೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.