ADVERTISEMENT

ತುಮಕೂರು: ಬುಗುಡನಹಳ್ಳಿ ಕೆರೆ ಖಾಲಿ; ಹರಿಯದ ಹೇಮೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 7:47 IST
Last Updated 22 ಏಪ್ರಿಲ್ 2025, 7:47 IST
ಬುಗುಡನಹಳ್ಳಿ ಕೆರೆ
ಬುಗುಡನಹಳ್ಳಿ ಕೆರೆ   

ತುಮಕೂರು: ನಗರದ ಜನರ ದಾಹ ನೀಗಿಸುವ ಬುಗುಡನಹಳ್ಳಿ ಕೆರೆ ಖಾಲಿಯಾಗುತ್ತಿದ್ದು, ನಗರದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಹೇಮಾವತಿಯಿಂದ (ಗೊರೂರು ಜಲಾಶಯ) ನೀರು ಹರಿಸುವ ಬಗ್ಗೆ ಹೇಳುತ್ತಲೇ ಬಂದಿದ್ದರೂ ಈವರೆಗೂ ಹರಿಸಲು ಸಾಧ್ಯವಾಗಿಲ್ಲ.

ಬುಗುಡನಹಳ್ಳಿ ಜಲ ಮೂಲವನ್ನು ಬಿಟ್ಟರೆ ನಗರಕ್ಕೆ ಕುಡಿಯುವ ನೀರು ಪೂರೈಸಲು ಬೇರೇ ಯಾವುದೇ ಮೂಲಗಳು ಇಲ್ಲ. ಕೆರೆ ಬರಿದಾದರೆ ನಗರಕ್ಕೆ ನೀರು ಸರಬರಾಜು ಬಹುತೇಕ ಸ್ಥಗಿತಗೊಳ್ಳಲಿದೆ. ಜಲಾಶಯದಿಂದ ನೀರು ಹರಿಸಿ ಕೆರೆ ತುಂಬಿಸುವುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಇಂದು, ನಾಳೆ ಎಂಬ ಭರವಸೆ ಸಿಕ್ಕಿದೆ. ಆದರೆ ನೀರು ಮಾತ್ರ ಹರಿದು ಬಂದಿಲ್ಲ.

ಪ್ರಸ್ತುತ ಬುಗುಡನಹಳ್ಳಿ ಕೆರೆಯಲ್ಲಿ 90 ಎಂಸಿಎಫ್‌ಟಿ ನೀರಿದ್ದು, ಅದರಲ್ಲಿ 60 ಎಂಸಿಎಫ್‌ಟಿ ನೀರನ್ನು ಬಳಸಿಕೊಳ್ಳಬಹುದು. ಉಳಿದ 30 ಎಂಸಿಎಫ್‌ಟಿ ನೀರು ಡೆಡ್‌ ಸ್ಟೋರೇಜ್. ನಗರದ ಜನರ ಬೇಡಿಕೆಗೆ ಅನುಗುಣವಾಗಿ ನೀರು ಸರಬರಾಜು ಮಾಡಿದ್ದರೆ ಈ ವೇಳೆಗಾಗಲೇ ಕೆರೆ ಖಾಲಿಯಾಗುತಿತ್ತು. ಮಿತವಾಗಿ ಸರಬರಾಜು ಮಾಡುವ ಮೂಲಕ ಸ್ವಲ್ಪ ದಿನಗಳ ಕಾಲ ಸಮಸ್ಯೆಯಾಗದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ನೋಡಿಕೊಂಡಿದ್ದಾರೆ.

ADVERTISEMENT

ಸದ್ಯ ಕೆರೆಯಿಂದ ಪ್ರತಿ ದಿನವೂ 1.4 ಎಂಸಿಎಫ್‌ಟಿ ನೀರು ಸರಬರಾಜು ಮಾಡಲಾಗುತ್ತಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೆರೆಯಿಂದ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 800 ಕೊಳವೆ ಬಾವಿಗಳಿಂದ 6 ಎಂಸಿಎಫ್‌ಟಿ ನೀರು ಸಿಗುತ್ತಿದೆ. ಪ್ರತಿ ದಿನವೂ ಕೆರೆ ಹಾಗೂ ಕೊಳವೆ ಬಾವಿ ಸೇರಿ ಸುಮಾರು 7 ಎಂಸಿಎಫ್‌ಟಿ ನೀರು ಕೊಡಲಾಗುತ್ತಿದೆ. ಬೇಸಿಗೆ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಲ ಮೂಲಗಳು ಬರಿದಾಗುತ್ತಿದ್ದು, ಕುಡಿಯುವ ನೀರಿನ ಬೇಡಿಕೆ ಹೆಚ್ಚುತ್ತಲೇ ಸಾಗಿದೆ.

ನಗರದಲ್ಲಿ ಪ್ರತಿ ದಿನವೂ 60ರಿಂದ 70 ಎಂಎಲ್‌ಡಿ ನೀರಿಗೆ ಬೇಡಿಕೆ ಇದ್ದು, ಪ್ರಸ್ತುತ ಅದರಲ್ಲಿ ಅರ್ಧದಷ್ಟು ಪ್ರಮಾಣದಲ್ಲೂ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಭಾಗಗಳಲ್ಲಿ ವಾರಕ್ಕೆ ಎರಡರಿಂದ ಮೂರು ಬಾರಿ, ಮತ್ತೆ ಕೆಲವು ಬಡಾವಣೆಗಳಲ್ಲಿ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಹರಿಸುವ ಅವಧಿಯನ್ನೂ ಕಡಿಮೆ ಮಾಡಲಾಗಿದೆ. ಐದಾರು ಗಂಟೆಗಳ ಕಾಲ ನೀರು ಬಿಡುವ ಕಡೆಗಳಲ್ಲಿ ಮೂರುನಾಲ್ಕು ಗಂಟೆಗಳಿಗೆ ಇಳಿಸಲಾಗಿದೆ.

ನೀರು ಬಿಡುವ ಸಮಯ ಕಡಿಮೆಯಾಗಿದ್ದು, ತೊಟ್ಟಿಗಳನ್ನೂ ತುಂಬಿಸಿಕೊಂಡು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರುವ ನೀರು ಮನೆ ಬಳಕೆಗೆ ಸಾಲುತ್ತಿಲ್ಲ. ಇನ್ನೂ ಮಾರ್ಚ್ ತಿಂಗಳಲ್ಲೇ ಇಂತಹ ಸ್ಥಿತಿಯಾದರೆ ಮುಂದೇನು? ಎಂದು ಗೃಹಿಣಿ ರಮಾ ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.