ADVERTISEMENT

ಅಪಪ್ರಚಾರ ಮಾಡುವವರ ಸಮಾಧಾನ ಪಡಿಸಲು ಆಗಲ್ಲ

ಹೇಮಾವತಿ ನೀರಿನ ವಿಚಾರ; ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:24 IST
Last Updated 4 ಜೂನ್ 2019, 20:24 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ತುಮಕೂರು: ಜಿಲ್ಲೆಗೆ ದೇವೇಗೌಡರು ಹೇಮಾವತಿ ನೀರು ಕೊಡುತ್ತಿಲ್ಲ ಎಂಬ ಹೇಳಿಕೆಯಲ್ಲಿ ಸತ್ಯವಿಲ್ಲ. ಮನಸ್ಸಿಗೆ ಬಂದಂತೆ ಪ್ರಚಾರ ಮಾಡುವವರನ್ನು ಸಮಾಧಾನ ಪಡಿಸಲು ಆಗುವುದಿಲ್ಲ ಎಂದು ಮಾಜಿ ಪ್ರಧಾನಿ ಮತ್ತು ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ದೇವೇಗೌಡ ಹೇಳಿದರು.

ಸೋಮವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಡಿಯುವ ನೀರಿಗೆ ನನ್ನ ಮೊದಲ ಆದ್ಯತೆ, ಜಿಲ್ಲೆಯ ಹಳ್ಳಿಗಳಿಗೆ ನೀರು ಒದಗಿಸಲು ಹೆಚ್ಚು ಗಮನಹರಿಸಬೇಕು’ ಎಂದರು.

‘ಇಂದಿರಾ ಗಾಂದಿ ಅವರು ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ ನೀರಾವರಿ ಸಚಿವನಾಗಿದ್ದೆ. ಆಗ ನೀರಿನ ಬಳಕೆ ಹಾಗೂ ನದಿ ಜೋಡಣೆ ಬಗ್ಗೆ ಒಂದು ಸಮಿತಿ ರಚಿಸಿದ್ದು, ಅದರ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸಿದ್ದೆ. ಇಂದಿರಾಗಾಂಧಿ ಅವರಿಂದಲೇ ಘಟಪ್ರಭಾ ಜಲಾಶಯ ಲೋಕಾರ್ಪಣೆ ಮಾಡಿಸಿದ್ದೆ ’ಎಂದು ವಿವರಿಸಿದರು.

ADVERTISEMENT

’ನೀರು ರಾಷ್ಟ್ರೀಯ ನೀತಿಯಡಿ ಬರುತ್ತದೆ. ಅದಕ್ಕಾಗಿ ಕೆಲವು ನೀತಿ ರೂಪಿಸಲಾಗಿದೆ. ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ನಾನು ನೀರಾವರಿ ಮಂತ್ರಿಯಾದಾಗಿನಿಂದಲೂ, ಕರ್ನಾಟಕ ನೀರಾವರಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೇನೆ’ ಎಂದು ಹೇಳಿದರು.

‘ಪರಿಸ್ಥಿತಿ ಹೀಗಿರುವಾಗ ದೇವೇಗೌಡರು ಹೇಮಾವತಿ ನದಿ ನೀರನ್ನು ತುಮಕೂರಿಗೆ ಹರಿಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಚಾರ ಮಾಡುವುದು ಅರ್ಥವಿಲ್ಲದ್ದು’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ‘ಮೈತ್ರಿ ಅಭ್ಯರ್ಥಿ ಗೆಲುವಿಗೆ ಮೈತ್ರಿ ಪಕ್ಷದ ಮುಖಂಡರೆಲ್ಲ ಪ್ರಚಾರ ಮಾಡುತ್ತಿದ್ದೇವೆ. ಸಂಸದ ಎಸ್.ಪಿ.ಮುದ್ದಹನುಮೇಗೌಡರೂ ಪ್ರಚಾರಕ್ಕೆ ಬರಲಿದ್ದಾರೆ. ಮನಸ್ಸಿಗೆ ನೋವಾಗಿದೆ ಒಂದೆರಡು ದಿನ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದರು. ಮುಂದೆ ನಡೆವ ಪ್ರಚಾರ ಸಭೆಗಳಿಗೆ ಬರಲಿದ್ದಾರೆ. ಕೆ.ಎನ್.ರಾಜಣ್ಣ ಅವರೂ ಮಧುಗಿರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಪ್ರಚಾರ ನೇತೃತ್ವ ವಹಿಸಲಿದ್ದಾರೆ’ ಎಂದರು.

ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜ್, ಚೌಡರೆಡ್ಡಿ ತೂಪಲ್ಲಿ, ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ಆರ್. ರಾಮಕೃಷ್ಣ, ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ, ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.