ADVERTISEMENT

ನುಡಿದಂತೆ ನಡೆಯದ ದೇವೇಗೌಡರು: ಜ್ಯೋತಿಪ್ರಕಾಶ್ ಮಿರ್ಜಿ ಟೀಕೆ

ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:06 IST
Last Updated 2 ಮೇ 2019, 11:06 IST
ಜ್ಯೋತಿಪ್ರಕಾಶ್ ಮಿರ್ಜಿ
ಜ್ಯೋತಿಪ್ರಕಾಶ್ ಮಿರ್ಜಿ   

ತುಮಕೂರು: ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ ಜ್ಯೋತಿಪ್ರಕಾಶ್ ಮಿರ್ಜಿ ನುಡಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಇದೇ ನನ್ನ ಕೊನೆಯ ಭಾಷಣ ಎಂದು ಹೇಳುತ್ತಿದ್ದ ದೇವೇಗೌಡರು ಈ ಬಾರಿ ಸ್ಪರ್ಧಿಸಿದ್ದಾರೆ. ಅವರ ಕುಟುಂಬದವರು ಸಾಕಷ್ಟು ಮಂದಿ ಅಧಿಕಾರದಲ್ಲಿದ್ದರೂ ಇನ್ನು ಅಧಿಕಾರ ದಾಹ ಮುಗಿದಿಲ್ಲ’ ಎಂದು ವ್ಯಂಗ್ಯವಾಡಿದರು.

ದೇವೇಗೌಡರನ್ನು ಎದುರು ಹಾಕಿಕೊಂಡರೆ ಯಾವ ನಾಯಕರೂ ಉಳಿಯುವುದಿಲ್ಲ. ಜಿಲ್ಲೆಯ ಕಾಂಗ್ರೆಸ್ ನಾಯಕರೂ ಅವರ ಎದುರು ಶರಣಾಗಬೇಕಾಗುತ್ತದೆ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಪರಮೇಶ್ವರ ಹಾಗೂ ಸಿದ್ದರಾಮಯ್ಯ ಅವರು ತುಮಕೂರನ್ನು ದೇವೇಗೌಡರಿಗೆ ವಹಿಸುವ ಮೂಲಕ ಇಲ್ಲಿನ ಕಾಂಗ್ರೆಸ್ ಪಕ್ಷವನ್ನು ಅವರೇ ಬಲಿ ಮಾಡುತ್ತಿದ್ದಾರೆ. ಎಲ್ಲಿಂದಲೋ ಅಧಿಕಾರಕ್ಕಾಗಿ ಬಂದವರಿಂದ ತುಮಕೂರಿನ ಅಭಿವೃದ್ಧಿ ನಿರೀಕ್ಷಿಸುವಂತಿಲ್ಲ ಎಂದು ಹೇಳಿದರು.

ADVERTISEMENT

ದೇವೇಗೌಡರು ಹಾಗೂ ಜೆಡಿಎಸ್ ನಾಯಕರನ್ನು ಹೀನಾಯವಾಗಿ ಟೀಕಿಸುತ್ತಿದ್ದ ಸಿದ್ದರಾಮಯ್ಯ, ಡಾ. ಪರಮೇಶ್ವರ ಅವರಂತಹ ನಾಯಕರೂ ಈಗ ದೇವೇಗೌಡರನ್ನು ಹಾಡಿ ಹೊಗಳುತ್ತಿದ್ದಾರೆ. ಇವರ ನೈತಿಕತೆ ಎಲ್ಲಿ ಹೋಯಿತು. ದೇವೇಗೌಡರು ಕಣ್ಣಿರು ಹಾಕುತ್ತಾ ಜನರನ್ನು ಮರಳು ಮಾಡುತ್ತಾರೆ. ಜನನಾಯಕ ತಾನು ಕಣ್ಣೀರು ಹಾಕುವುದಲ್ಲ, ಜನರ ಕಣ್ಣೀರು ಒರೆಸುವಂತಿರಬೇಕು ಎಂದರು.

ದೇವೇಗೌಡರ ಕುಟುಂಬ ತುಮಕೂರಿನಲ್ಲಿ ಬೇರುಬಿಟ್ಟರೆ, ಅದನ್ನು ಬಿಡಿಸಲು ಸ್ವಾತಂತ್ರ್ಯ ಹೋರಾಟದ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಮತ್ತೊಬ್ಬ ಮಗನಿಗೆ ತುಮಕೂರು

ಸ್ವಕ್ಷೇತ್ರ ಹಾಸನದಲ್ಲಿ ಸ್ಪರ್ಧಿಸುತ್ತಿದ್ದ ಅವರು ತುಮಕೂರಿಗೆ ಏಕೆ ಬಂದರು. ಸ್ಥಳೀಯ ಮುಖಂಡರಿಗೆ ಅವಕಾಶ ನೀಡಬೇಕಾಗಿತ್ತು ಎಂದು ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು.

ಹಾಸನವನ್ನು ರೇವಣ, ಪ್ರಜ್ವಲ್‌ಗೆ, ರಾಮನಗರ ಹಾಗೂ ಮಂಡ್ಯವನ್ನು ಕುಮಾರ ಸ್ವಾಮಿ ಕುಟುಂಬಕ್ಕೆ ಬಿಟ್ಟುಕೊಟ್ಟಿರುವ ಅವರು ತುಮಕೂರನ್ನು ಇನ್ನೊಬ್ಬ ಮಗ ರಮೇಶ್‌ ಅವರಿಗೆ ಕೊಡುಗೆಯಾಗಿ ನೀಡುವ ಉದ್ದೇಶದಿಂದ ಸ್ಪರ್ಧಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.