ADVERTISEMENT

ತಿಪಟೂರು: ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಪ್ರಗತಿ ವರದಿಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 1:31 IST
Last Updated 30 ಜನವರಿ 2021, 1:31 IST
ತಿಪಟೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 2020-21ನೇ ಸಾಲಿನ ಡಿಸೆಂಬರ್ 2020ರ ಅಂತ್ಯಕ್ಕೆ ಸಾಧಿಸಿದ ಪ್ರಗತಿ ವರದಿಯ ಸಭೆ ನಡೆಯಿತು
ತಿಪಟೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 2020-21ನೇ ಸಾಲಿನ ಡಿಸೆಂಬರ್ 2020ರ ಅಂತ್ಯಕ್ಕೆ ಸಾಧಿಸಿದ ಪ್ರಗತಿ ವರದಿಯ ಸಭೆ ನಡೆಯಿತು   

ತಿಪಟೂರು: 15ನೇ ಹಣಕಾಸು ಯೋಜನೆಯಡಿ ಕಾಮಗಾರಿಗೆ ಬಿಡುಗಡೆಯಾಗಿರುವ ಅನುದಾನವನ್ನು ಕ್ಷೇತ್ರವಾರು ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2020-21ನೇ ಸಾಲಿನ ಪ್ರಗತಿ ವರದಿಯ ಸಭೆಯಲ್ಲಿ ಮಾತನಾಡಿದರು.

15ನೇ ಹಣಕಾಸು ಯೋಜನೆಯಲ್ಲಿ ಕ್ಷೇತ್ರವಾರು ಬಿಡುಗಡೆ ಮಾಡಿರುವ ₹1.40 ಕೋಟಿ ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಸಿದ್ದಾಪುರ ಸುರೇಶ್ ಆರೋಪಿಸಿದರು. ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ ಮಧ್ಯಪ್ರವೇಶಿಸಿ ಅನುದಾನ ಎಲ್ಲರಿಗೂ ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ. ಹಿಂದಿನ ಅನುದಾನಗಳನ್ನು ಗಣನೆಗೆ ತೆಗೆದುಕೊಂಡು ಹಂಚಿದ್ದೇವೆ ಎಂದರು.

ADVERTISEMENT

ಇದರಿಂದ ಸಮಾಧಾನಗೊಳ್ಳದ ಸದಸ್ಯರ ನಡುವೆ ವಾಕ್ಸಮರ, ಆರೋಪ, ಪ್ರತ್ಯಾರೋಪ ನಡೆಯಿತು.

ಸದಸ್ಯೆ ಮೀನಾಕ್ಷಿ ಪರಪ್ಪ ಮಾತನಾಡಿ, ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಕೂಲಿ ಹಣ ಪಡೆದುಕೊಳ್ಳಲು ಪಿಡಿಒ ಲಂಚದ ರೂಪದಲ್ಲಿ ₹2,000 ಕೇಳುತ್ತಾರೆ. ಸಾಮಾನ್ಯ ಜನರು ಲಂಚ ಕೊಟ್ಟು ಕಾಮಗಾರಿಯ ಹಣ ಪಡೆದುಕೊಳ್ಳಬೇಕೆ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಸೂಕ್ತ ದಾಖಲೆಯೊಂದಿಗೆ ಪಿಡಿಒ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿದರು. ಪಿಡಿಒಗಳಿಗೆ ಕಡಿವಾಣ ಹಾಕುವಂತೆ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಅಧಿಕಾರಿಗಳು ಗೈರಾಗುವುದು ಹೆಚ್ಚಾಗುತ್ತಿದೆ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಸಭೆಗಳಲ್ಲಿ ಸದಸ್ಯರು ದಾಖಲಿಸಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದು, ಸಭೆಗಳಿಗೂ ಗೈರು ಹಾಜರಾದರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಸುವುದು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ಸಭೆಗೆ ಹಾಜರಾಗದ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ನೀಡಿ ಶಿಸ್ತು ಕ್ರಮಕ್ಕೆ ಆಗ್ರಹಿಸಿದರು.

ಸದಸ್ಯ ಸುರೇಶ್ ಸಿದ್ದಾಪುರ, ಕಚೇರಿಯ ಪ್ರಗತಿ ವರದಿಗಳು ಸೇರಿದಂತೆ ಕೆಲವು ಕಾಗದ ಪತ್ರಗಳು ಕಚೇರಿಯ ಆವರಣ ಬಿಟ್ಟು ಖಾಸಗಿ ವ್ಯಕ್ತಿಗಳ ಹತ್ತಿರ ಟೈಪಿಂಗ್‍ ಮಾಡಿಸಲಾಗುತ್ತದೆ ಎಂದು ಆರೋಪಿಸಿದರು. ಎಸ್‌ಡಿಎ ಕುಮಾರಸ್ವಾಮಿ ಮದ್ಯೆ ಪ್ರವೇಶಿಸಿ ಸುರೇಶ್ ಅವರಿಗೆ ಸುಮ್ಮನೆ ಕುಳಿತುಕೊಳ್ಳಿ ಎಂದು ಗದರಿದರು.

ತಾ.ಪಂ. ಉಪಾಧ್ಯಕ್ಷ ಎನ್.ಶಂಕರ್, ಸ್ಥಾಯಿ ನಸಮಿತಿ ಅಧ್ಯಕ್ಷೆ ಜಯಂತಿ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.