
ಕೆ.ಎನ್.ರಾಜಣ್ಣ
ಚಿಕ್ಕನಾಯಕನಹಳ್ಳಿ: ‘ನಾಯಕತ್ವ ಗೊಂದಲ ಬಗೆಹರಿಯಬೇಕಾದರೆ ವಿಧಾನಸಭೆ ವಿಸರ್ಜಿಸಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಚುನಾವಣೆ ಎದುರಿಸೋಣ’ ಎಂದು ಶಾಸಕ ಕೆ.ಎನ್.ರಾಜಣ್ಣ ಬುಧವಾರ ಇಲ್ಲಿ ಸಲಹೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಮಾಡೋಣ. ಬಹುಮತ ಬಂದರೆ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಲಿ’ ಎಂದು ಪುನರುಚ್ಚರಿಸಿದರು.
‘ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯಬೇಕು. ಇಲ್ಲವಾದರೆ ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಬದಲಾವಣೆ ಮಾಡುವುದಿದ್ದರೆ ಸಿಎಲ್‌ಪಿ ಸಭೆಯಲ್ಲೇ ನಿರ್ಧಾರವಾಗಲಿ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಯಾರೂ ಹೇಳಿಲ್ಲ. 30–30 ತಿಂಗಳು ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಎಂದು ಸುಮ್ಮನೆ ಕೆಲವರು ಹೇಳುತ್ತಿದ್ದಾರೆ’ ಎಂದರು.
2-3 ದಿನದಲ್ಲಿ ಒಳ್ಳೆ ಸುದ್ದಿ: ಶಾಸಕ
ರಾಮನಗರ: ‘ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಅವರಿಗೂ ಕೂಲಿ ಕೊಡಬೇಕು. 2–3 ದಿನಗಳಲ್ಲಿ ಒಳ್ಳೆಯ ಸುದ್ದಿ ಬರುವ ವಿಶ್ವಾಸವಿದೆ. ನಾಯಕರು ಒಳ್ಳೆಸುದ್ದಿ ಸಿಗಲಿದೆ ಎಂದಿದ್ದಾರೆ. ’ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಗತಿತಗ ಹೇಳಿದರು. ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ‘ಬೆಂಗಳೂರಿಗೆ ತುರ್ತಾಗಿ ಬರುವಂತೆ ಡಿಸಿಎಂ ಸಾಹೇಬ್ರು ಕರೆದಿದ್ದಾರೆ. ಅಲ್ಲಿ ಶಾಸಕರ ಸಭೆ ಮಾಡುತ್ತಾರೋ ಅಥವಾ ಮಾತುಕತೆ ನಡೆಸುತ್ತಾರೊ ಗೊತ್ತಿಲ್ಲ’ ಎಂದರು. ‘ದೆಹಲಿಗೆ ಹೋಗಿದ್ದಾಗ ಪಕ್ಷದ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ. ಕೆಲ ಶಾಸಕರು ಸೇರಿಕೊಂಡು ಮುಂದೇನು ಮಾಡಬೇಕೆಂಬುದರ ಕುರಿತು ಚರ್ಚಿಸಿ ವಾಪಸ್ ಬಂದಿದ್ದೇವೆ’ ಎಂದು ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದರು.
ವದಂತಿಗೆ 2 ದಿನಗಳಲ್ಲಿ ತೆರೆ: ರಾಯರಡ್ಡಿಕೊಪ್ಪಳ: ‘ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಪಕ್ಷದ ಹಿತದೃಷ್ಟಿಯಿಂದ ಎರಡು ದಿನಗಳಲ್ಲಿ ತೆರೆ ಬೀಳಲಿದೆ’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು. ‘ನಾಲ್ಕು ಗೋಡೆಗಳ ನಡುವೆ ನಡೆದ ಚರ್ಚೆ ನನಗೆ ಗೊತ್ತಿಲ್ಲ. ಷರತ್ತು ಅಥವಾ ಒಪ್ಪಂದದ ಬಗ್ಗೆ ನಮ್ಮ ಮುಂದೆ ಯಾರೂ ಹೇಳಿಲ್ಲ’ ಎಂದು ಬುಧವಾರ ಇಲ್ಲಿ ಪ್ರತಿಕ್ರಿಯಿಸಿದರು. ‘ಮುಖ್ಯಮಂತ್ರಿ ಆಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಎಲ್ಲಿಯಾದರೂ ಹೇಳಿದ್ದಾರೆಯೇ’ ಎಂದು ಅವರು ಪ್ರಶ್ನಿಸಿದರು.
‘ನಮ್ಮವರ ಮನಸ್ಸು ಖರ್ಗೆಗೆ ಅರ್ಥವಾಗುತ್ತೆ’
ವಿಜಯಪುರ: ‘ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು. ಅವರಿಗೆ ನಮ್ಮವರ (ದಲಿತರು) ಮನಸ್ಸು ಅರ್ಥವಾಗುತ್ತದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಇಲ್ಲಿ ಹೇಳಿದರು. ‘ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕೃತಿ ಇದೆ. ಪಕ್ಷದ ಹೈಕಮಾಂಡ್ ನಿರ್ಣಯವೇ ಅಂತಿಮ. ಅದರಂತೆಯೇ ನಡೆಯುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.