ADVERTISEMENT

ದೀಪಾವಳಿ ಸಂಭ್ರಮ; ಖರೀದಿ ಭರಾಟೆ

ಅಂಗಡಿಗಳಲ್ಲಿ ಶನಿವಾರ ಬೆಳಿಗ್ಗೆಯೇ ಪೂಜೆಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 15:54 IST
Last Updated 14 ನವೆಂಬರ್ 2020, 15:54 IST
ಹೊರಪೇಟೆಯ ಅಂಗಡಿಯೊಂದರ ಮುಂದೆ ದೀಪಗಳ ಸಾಲು
ಹೊರಪೇಟೆಯ ಅಂಗಡಿಯೊಂದರ ಮುಂದೆ ದೀಪಗಳ ಸಾಲು   

ತುಮಕೂರು: ದೀಪಾವಳಿ ಪ‍್ರಯುಕ್ತ ನಗರದ ಅಂತರಸನಹಳ್ಳಿ ಮಾರುಕಟ್ಟೆ ಶನಿವಾರವೂ ಜನರಿಂದ ಗಿಜಿಗುಡುತ್ತಿತ್ತು. ಹೂ, ಹಣ್ಣು,ಬಾಳೆ ದಿಂಡು ಸೇರಿದಂತೆ ಹಬ್ಬಕ್ಕೆ ಅಗತ್ಯವಿದ್ದ ಸಾಮಗ್ರಿಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿಯೇ ಸೇರಿದ್ದರು. ಅಲ್ಲದೆ ನಗರದ ಕೆಲವು ಮಾಲೀಕರು ಶನಿವಾರವೇ ಅಂಗಡಿಗಳಲ್ಲಿ ಪೂಜೆ ಸಲ್ಲಿಸಿ ಜನರಿಗೆ ಸಿಹಿ ಹಂಚಿದರು.

ಅಂತರಸನಹಳ್ಳಿ ಮಾರುಕಟ್ಟೆ, ಎಸ್‌.ಎಸ್‌.ಪುರಂ, ಶೆಟ್ಟಿಹಳ್ಳಿ, ಜೆ.ಸಿ.ರಸ್ತೆ ಹೀಗೆ ವಿವಿಧ ಕಡೆಗಳ ರಸ್ತೆ ಬದಿಯಲ್ಲಿ ಶುಕ್ರವಾರದಿಂದಲೂ ಹೂ, ಹಣ್ಣು, ಬಾಳೆ ಕಂದಿನ ವ್ಯಾಪಾರ ಜೋರಾಗಿತ್ತು. ಹಬ್ಬದ ಪ್ರಯುಕ್ತ ನಗರದ ಬಿ.ಎಚ್‌.ರಸ್ತೆಯಲ್ಲಿರುವ ಹಣ್ಣಿನ ಅಂಗಡಿಗಳ ಮುಂದೆ ಸೇಬು, ದಾಳಿಂಬೆ, ಬಾಳೆ, ಸೀಬೆ, ಕಿತ್ತಳೆ ಹೀಗೆ ನಾನಾ ಹಣ್ಣುಗಳ ರಾಶಿಯನ್ನು ವ್ಯಾಪಾರಿಗಳು ಮಾಡಿದ್ದರು.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದಲೂ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ಜನಜಂಗುಳಿ ಹೆಚ್ಚಿದೆ. ಸೇವಂತಿಗೆ, ಗುಲಾಬಿ ಸೇರಿದಂತೆ ನಾನಾ ಬಗೆಯ ಹೂಗಳ ಖರೀದಿಗೆ ಜನರು ಹೆಚ್ಚಿನದಾಗಿಯೇ ಸೇರಿದ್ದರು.

ADVERTISEMENT

ಕೆ.ಜಿ ಸೇಬು ಗುಣಮಟ್ಟ ಆಧರಿಸಿ ₹ 140ರಿಂದ 180ರ ವರೆಗೂ ಇತ್ತು. ಏಲಕ್ಕಿ ಬಾಳೆ ಹಣ್ಣು ಕೆ.ಜಿ ₹ 60, ಕಿತ್ತಳೆ ₹ 50 ಇತ್ತು. ಈ ಹಣ್ಣುಗಳೇ ಪ್ರಮುಖವಾಗಿ ಮಾರಾಟವಾಗುತ್ತಿದ್ದವು. ಪೂಜೆಯ ಕಾರಣದಿಂದ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಿತ್ತು. ಹೂವಿನ ಹಾರಗಳೂ ಅಷ್ಟೇ ಗಾತ್ರದ ಆಧಾರದಲ್ಲಿ ₹ 60ರಿಂದ 150ರವರೆಗೂ ಮಾರಾಟವಾದವು.

ಪೂಜೆ ಸಂಭ್ರಮ: ಶನಿವಾರ ಬೆಳ್ಳಂ ಬೆಳಿಗ್ಗೆಯೇ ಎಂ.ಜಿ.ರಸ್ತೆ, ಎಸ್‌.ಎಸ್‌.ಪುರಂ, ಬಿ.ಎಚ್‌.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿಗಳ ಮಾಲೀಕರು, ಬಾಗಿಲು ತೆರೆದು ಅಂಗಡಿಗಳನ್ನು ಸ್ವಚ್ಛಗೊಳಿಸಿದರು. ಬೆಳಿಗ್ಗೆಯೇ ಪೂಜೆ ನಡೆಸಿ ಜನರಿಗೆ ಸಿಹಿ ವಿತರಿಸಿದರು. ಚಿನ್ನಾಭರಣ ಅಂಗಡಿಗಳ ಮಾಲೀಕರು ಪ್ರಮುಖವಾಗಿ ಪೂಜೆ ನೆರವೇರಿಸಿದರು. ಭಾನುವಾರ ಲಕ್ಷ್ಮಿಪೂಜೆ ಮಾಡಲು ಕೆಲವು ಅಂಗಡಿಗಳ ಮಾಲೀಕರು ಶನಿವಾರವೇ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.