ಅಮಾನತು
ಮಧುಗಿರಿ: ಕರ್ತವ್ಯ ಲೋಪ, ಭ್ರಷ್ಟಾಚಾರ ಹಾಗೂ ದುರ್ನಡತೆ ಆರೋಪದ ಮೇಲೆ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಗಂಗಾಧರ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
2023ರ ಡಿಸೆಂಬರ್ 14ರಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯ ಜಾಗೃತದಳದ ಅಧಿಕಾರಿಗಳಿಗೆ ಚಿಕಿತ್ಸೆ ನೀಡಲು ಡಾ.ಗಂಗಾಧರ ಅವರು ಹಣ ಪಡೆದಿದ್ದಾರೆ ಎಂದು ಎ.ಲಹರಿಕ ಹಾಗೂ ಎಸ್.ಕೆ.ರಂಗನಾಥ್ ಅವರು ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಜಾಗೃತ ಅಧಿಕಾರಿಗಳು ವರದಿ ನೀಡಿದ್ದು, ಇದರ ಆಧಾರದ ಮೇಲೆ ಡಾ.ಗಂಗಾಧರ ಅವರನ್ನು ಅಮಾನತುಗೊಳಿಸಲಾಗಿದೆ.
ಏನಿದು ಪ್ರಕರಣ: ಡಾ.ಗಂಗಾಧರ ಅವರು ಲಹರಿಕಾ ಅವರ ದೃಷ್ಟಿ ಪರಿಶೀಲಿಸಿ, ಕನ್ನಡಕ ಧರಿಸುವುದು ಸೂಕ್ತವೆಂದು ಸಲಹೆ ನೀಡಿ ನಂತರ ಅವರೆ ಕನ್ನಡಕ ತಂದುಕೊಟ್ಟು ₹1,300 ಪಡೆದಿದ್ದರು ಎಂದು ಲಹರಿಕಾ ಲಿಖಿತವಾಗಿ ದೂರು ನೀಡಿದ್ದರು. ನಂತರ ಡಾ.ಗಂಗಾಧರ ಪಡದ ಹಣವನ್ನು ಹಿಂದಿರುಗಿಸಿದ್ದರು. ದೂರುದಾರರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಪಡೆದು ಕನ್ನಡಕ ಒದಗಿಸಿ, ಸರ್ಕಾರಿ ಕಚೇರಿಯನ್ನು ಲಾಭಕ್ಕಾಗಿ ಬಳಸಿಕೊಂಡಿರುವುದು ಸಾಬೀತಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಹನುಮಕ್ಕ ಎಂಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕ ಒದಗಿಸಲು ಲಂಚ ಪಡೆದಿದ್ದು, ಸರಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿಲ್ಲವೆಂದು ರೋಗಿ ಸಂಬಂಧಿ ಎಸ್.ಕೆ. ರಂಗನಾಥ್ ಜಾಗೃತಾಧಿಕಾರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.