ADVERTISEMENT

ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ: ನಿರುಪಯುಕ್ತವಾದ ಒಳಚರಂಡಿ

ಸಾರ್ವಜನಿಕರ ಆರೋಪ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 3:54 IST
Last Updated 21 ಡಿಸೆಂಬರ್ 2020, 3:54 IST
ಒಳಚರಂಡಿ ಸಂಸ್ಕರಣಾ ಘಟಕದ ತೆರೆದ ಕೊಳದಲ್ಲಿ ಗಿಡಗಂಟಿಗಳು ಬೆಳೆದಿವೆ
ಒಳಚರಂಡಿ ಸಂಸ್ಕರಣಾ ಘಟಕದ ತೆರೆದ ಕೊಳದಲ್ಲಿ ಗಿಡಗಂಟಿಗಳು ಬೆಳೆದಿವೆ   

ತುರುವೇಕೆರೆ: ಪಟ್ಟಣದ ಒಳಚರಂಡಿ ಕಾಮಗಾರಿ ಪ್ರಾರಂಭವಾಗಿ 13 ವರ್ಷ ಕಳೆದರೂ, ಇದುವರೆಗೂ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿದೆ.

ಪಟ್ಟಣ ಪಂಚಾಯಿತಿ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ₹ 6.75 ಕೋಟಿ ವೆಚ್ಚದಲ್ಲಿ 2007ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಅಂದಿನ ಶಾಸಕಎಂ.ಟಿ.ಕೃಷ್ಣಪ್ಪ ಈ ಕಾಮಗಾರಿಗೆ ಚಾಲನೆ ನೀಡಿದ್ದರು.

ಒಳಚರಂಡಿ ಮಂಡಳಿಯು 2009ರಲ್ಲಿ ಮೊದಲನೇ ಹಂತವಾಗಿ ಕೊಳವೆ ಮಾರ್ಗ ಹಾಗೂ ಮ್ಯಾನ್‍ ಹೋಲ್‍ ಕಾಮಗಾರಿಯನ್ನು ಮುಗಿಸಿತು.

ADVERTISEMENT

ಎರಡನೇ ಹಂತದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣದ ಭೂ ಹಸ್ತಾಂತರ ಪ್ರಕ್ರಿಯೆಯ ಸಮಸ್ಯೆಯಿಂದಾಗಿ ಅನುಷ್ಠಾನ ವಿಳಂಬವಾಯಿತು. ಕೊಳವೆ ಮಾರ್ಗ ಹಾಗೂ ಮ್ಯಾನ್‍ ಹೋಲ್‍ ಕಾಮಗಾರಿಯನ್ನು 2010ರ ಅಕ್ಟೋಬರ್‌ನಲ್ಲಿ ಹಾಗೂ ಕೊಳಚೆ ನೀರು ಸಂಸ್ಕರಣಾ ಘಟಕವನ್ನು 2014ರ ಮಾರ್ಚ್‍ನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಕೊಳಚೆ ನಿರ್ಮೂಲನ ಮಂಡಳಿ ಪಟ್ಟಣ ಪಂಚಾಯಿತಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಅಂದಿನ ಆಡಳಿತ ಮಂಡಳಿಯು ಒಳಚರಂಡಿ ಸಂಪರ್ಕ ಪಡೆದುಕೊಳ್ಳವಂತೆ ಕರಪತ್ರ ಹೊರಡಿಸಿತ್ತು. ಈ ವೇಳೆ ಕೆಲ ಸದಸ್ಯರು ಒಳಚರಂಡಿ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಎಂದು ಅಪಸ್ವರ ತೆಗೆದಿದ್ದರು.

ಮ್ಯಾನ್‍ ಹೋಲ್‍ಗಳಿಂದ ಬಂದ ನೀರನ್ನು ಸಂಸ್ಕರಿಸಿದ ಮೇಲೆ ಉಳಿಯುವ ತ್ಯಾಜ್ಯ ನೀರನ್ನು ಹೊರ ಹಾಕಲು ಕೊಳಚೆ ನಿರ್ಮೂಲನ ಮಂಡಳಿ ವ್ಯವಸ್ಥೆ ಕಲ್ಪಿಸಿಲಿಲ್ಲವೆಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಒಳಚರಂಡಿ ವ್ಯವಸ್ಥೆಯನ್ನು ಸುಪರ್ದಿಗೆ ತೆಗೆದುಕೊಳ್ಳಲು ಹಿಂದೇಟು ಹಾಕಿದರು.

ಪಟ್ಟಣದ 14 ವಾರ್ಡ್‍ಗಳಲ್ಲಿ 1,382 ಮ್ಯಾನ್‍ ಹೋಲ್‍ ನಿರ್ಮಿಸಿದ್ದು, ಇದುವರೆಗೆ ಯಾವುದೇ ಮನೆಗೆ ಸಂಪರ್ಕ ಕಲ್ಪಿಸಿಲ್ಲ. ಕೆಲವರು ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಪಡೆದಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಮ್ಯಾನ್‍ ಹೋಲ್‍ಗಳು ಕಳಪೆಯಾಗಿರುವುದರಿಂದ ಅಲ್ಲಲ್ಲಿ ಶಿಥಿಲವಾಗಿವೆ. ಒಳಚರಂಡಿಯಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಮಳೆಗಾಲದಲ್ಲಿ ಮಳೆ ನೀರುವ ಮತ್ತು ಚರಂಡಿ ನೀರು ಸೇರಿ ರಸ್ತೆ ಮೇಲೆಯೇ ಕೊಳಚೆ ನೀರು ಹರಿದು ಗಬ್ಬು ವಾಸನೆಯೊಡೆಯುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಿದ್ದು ಸಾಂಕ್ರಾಮಿಕ ರೋಗಧ ಭೀತಿಯೂ ಜನರಲ್ಲಿಮೂಡಿದೆ.

ಕೆಲ ವಾರ್ಡ್‌ಗಳಲ್ಲಿ ಹೊಸದಾಗಿ ಡಾಂಬರ್‌ ಹಾಕಲು ಮ್ಯಾನ್‍ ಹೋಲ್‍ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಮ್ಯಾನ್‍ಹೋಲ್‍ ದುರಸ್ತಿಗಾಗಿ ಮತ್ತೆ ಡಾಂಬರ್‌ ಕೀಳಬೇಕಾದ ಪರಿಸ್ಥಿತಿ ಇದೆ.

ಸಿಗದ ಪರಿಹಾರ: 2017ರಲ್ಲಿ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಮನೋಜ್‍ ಎಂಬ ಯುವಕ ಕುರಿ ಮೈತೊಳೆಯಲು ಹೋಗಿ ಬಿದ್ದು, ಮೃತಪಟ್ಟಿದ್ದ. ಇದುವರೆಗೆ ಬಿಡಿಗಾಸು ಪರಿಹಾರ ನೀಡಿಲ್ಲ ಎಂದು ಪೋಷಕರು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.