ADVERTISEMENT

ವೇಗದೂತ ಬಸ್‌ ಓಡಿಸಿ: ಪ್ರಯಾಣಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 1:38 IST
Last Updated 26 ಜನವರಿ 2021, 1:38 IST

ಶಿರಾ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿರಾ ಘಟಕದಿಂದ ಶಿರಾ ನಗರದಿಂದ ಬೆಂಗಳೂರು ಮತ್ತು ತುಮಕೂರಿಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ಸಮಯದಲ್ಲಿ ಎಕ್ಸ್‌ಪ್ರೆಸ್‌‌ (ತಡೆರಹಿತ) ಬಸ್‌ಗಳನ್ನು ಓಡಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಆಸ್ಪತ್ರೆಗೆ ಹೋಗುವವರು ಸೇರಿದಂತೆ ಬಹಳಷ್ಟು ಮಂದಿ ಶಿರಾದಿಂದ ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಬೆಂಗಳೂರು ಮತ್ತು ತುಮಕೂರಿಗೆ ಪ್ರಯಾಣ ಮಾಡುತ್ತಿರುತ್ತಾರೆ. ಆದರೆ ಬೆಳಗಿನ ಸಮಯದಲ್ಲಿ ವೇಗದೂತ ಬಸ್‌ಗಳು ಬರದಿರುವುದರಿಂದ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಈ ಬಸ್‌ಗಳು ಎಲ್ಲಾ ಕಡೆ ನಿಲ್ಲಿಸಿಕೊಂಡು ಹೋಗುವುದರಿಂದ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗದೆ ಸಂಕಷ್ಟ ಪಡುವಂತಾಗಿದೆ. ಜೊತೆಗೆ ಬೆಳಗಿನ ಸಮಯದಲ್ಲಿ ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮದ ಬಸ್‌ಗಳು ಶಿರಾದೊಳಗೆ ಬರದೆ ಬೈಪಾಸ್‌ನಲ್ಲಿ ಹೋಗುತ್ತಿವೆ. ಒಂದು ವೇಳೆ ಬಂದರೂ ತುಮಕೂರಿಗೆ ಹೋಗುವುದಿಲ್ಲ ಎಂದು ಹೇಳುತ್ತಾರೆ. ಶಿರಾ ಘಟಕದಿಂದ ಓಡಿಸುತ್ತಿರುವ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣ ಮಾಡಲಿ ಎಂದು ಇವರು ಎಕ್ಸ್‌ಪ್ರೆಸ್‌ ಬಸ್‌ಗಳನ್ನು‌ ಓಡಿಸದೆ ಬೇರೆ ಡಿಪೊದ ಬಸ್‌ಗಳು ಸಹ ಶಿರಾದೊಳಗೆ ಬರದಂತೆ ಡಿಪೊ ಸಿಬ್ಬಂದಿಯೇ ತಡೆಯುತ್ತಿದ್ದಾರೆ ಎನ್ನುವುದು ಪ್ರಯಾಣಿಕರ ಆರೋಪ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.