ADVERTISEMENT

ಕಸ ಸಂಗ್ರಹಣೆಗೆ ಬಂತು ‘ಜೋಡಿ ಕಸದ ಬುಟ್ಟಿಗಳು’

ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ ನಗರದ 48 ಕಡೆ ಅಳವಡಿಕೆ, ಕಸ ನಿರ್ವಹಣೆಗೆ ವಿನೂತನ ಪ್ರಯತ್ನ

ರಾಮರಡ್ಡಿ ಅಳವಂಡಿ
Published 27 ಏಪ್ರಿಲ್ 2019, 20:15 IST
Last Updated 27 ಏಪ್ರಿಲ್ 2019, 20:15 IST
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಳವಡಿಸಿರುವ ಜೋಡಿ ಕಸದ ಬುಟ್ಟಿಗಳು
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಳವಡಿಸಿರುವ ಜೋಡಿ ಕಸದ ಬುಟ್ಟಿಗಳು   

ತುಮಕೂರು: ಅಯ್ಯೊ ಕಸದ ತೊಟ್ಟಿ. ನೋಡುವ ಹಾಗಿಲ್ಲ. ರಸ್ತೆ ಅಕ್ಕಪಕ್ಕ ಹಾದು ಹೊರಟರೆ ದುರ್ನಾತವೊ ದುರ್ನಾತ. ಬಡಾವಣೆ, ರಸ್ತೆಗಳ ಅಕ್ಕಪಕ್ಕದಲ್ಲಿ ಕಸದ ತೊಟ್ಟಿಗಳನ್ನು ಕಂಡಾಗ ಬಹುತೇಕರು ಬೇಸರದಿಂದ ಹೇಳುವ ಮಾತುಗಳು.

ಆದರೆ, ತುಮಕೂರು ಮಹಾನಗರದಲ್ಲಿ ವಿವಿಧ ಕಡೆ ಹಾಕಿರುವ ‘ಕಸದ ಡಬ್ಬಿಗಳು’ ಸಾರ್ವಜನಿಕರು ಗಮನ ಸೆಳೆಯುತ್ತಿವೆ. ಬಿಸಿಲಿಗೆ ಫಳ ಫಳ ಹೊಳೆಯುತ್ತ, ನೆಲದಿಂದ ಸ್ವಲ್ಪ ಮೇಲೆತ್ತರದಲ್ಲಿ ಗಾಳಿಯಲ್ಲಿ ಹೊಯ್ದಾಡುವ ರೀತಿ ಕಾಣುತ್ತವೆ. ದೂರದಿಂದ ಇವುಗಳನ್ನು ಕಂಡವರು ಅರೆರೆ ಇದೇನಿದುಎಂದು ಹತ್ತಿರ ಹೋಗಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಾರ್ವಜನಿಕರಿಂದ ಈ ಮೆಚ್ಚುಗೆಯ ಕಾರ್ಯಕ್ಕೆ ಪಾತ್ರವಾಗಿರುವುದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಆಯ್ದ ಪ್ರದೇಶಗಳಲ್ಲಿ ₹ 32 ಲಕ್ಷ ಮೊತ್ತದಲ್ಲಿ ಈ ತೂಗು ಜೋಡಿ ಕಸದ ಬುಟ್ಟಿ(ಟ್ವಿನ್ ಬಿನ್ಸ್) ಅಳವಡಿಸಲಾಗಿದೆ.

ADVERTISEMENT

ಮಹಾನಗರದಲ್ಲಿ ಪ್ರತಿ ದಿನ 130 ಟನ್‌ಗೂ ಅಧಿಕ ಪ್ರಮಾಣದ ಕಸ ಉತ್ಪತ್ತಿಯಾಗುತ್ತದೆ. ಅಷ್ಟೂ ಕಸ ವಿಲೇವಾರಿ ಪಾಲಿಕೆಗೆ ದೊಡ್ಡ ಸವಾಲಾಗಿದೆ. ಅದರಲ್ಲೂ ಕೆಲ ಕಡೆ ಹೆಚ್ಚು ಕಸ ಬೀಳುತ್ತದೆ. ಎಷ್ಟೇ ನಿರ್ವಹಣೆ ಮಾಡಿದರೂ, ಜಾಗೃತಿ ಮೂಡಿಸಿದರೂ ಇಂತಹ ಸ್ಥಳಗಳಲ್ಲಿ ಘನತ್ಯಾಜ್ಯ ತಂದು ಸುರಿಯುವುದು ಮುಂದುವರಿದಿದೆ. ಹೀಗಾಗಿ, ಇಂತಹ ಸ್ಥಳಗಳಿಗೆ ‘ಬ್ಲ್ಯಾಕ್ ಸ್ಪಾಟ್’ ಎಂದು ಪಾಲಿಕೆಯು ಗುರುತಿಸಿದೆ.

ಮಹಾನಗರ ಪಾಲಿಕೆ ಗುರುತಿಸಿದ ಈ ಸ್ಥಳಗಳಲ್ಲಿಯೇ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ಕಂಪನಿಯು ವಿನೂತನ ಜೋಡಿ ಕಸದ ಬುಟ್ಟಿಗಳನ್ನು (ಟ್ವಿನ್ ಬಿನ್ಸ್) ಅಳವಡಿಸಿದೆ. ಈ ಕಸದ ಬುಟ್ಟಿಗಳ ಮೂಲಕ ಕಸವನ್ನು ಸ್ಮಾರ್ಟ್ ವಿಧಾನದಲ್ಲಿ ಸಂಗ್ರಹಿಸಿ ನಗರವನ್ನು ಕಸಮುಕ್ತಗೊಳಿಸುವುದು ಇದರ ಉದ್ದೇಶವಾಗಿದೆ.

ಏನಿದು ತೂಗು ಕಸದ ಬುಟ್ಟಿಗಳು

ಒಟ್ಟು ಎರಡು ತೂಗು ಕಸದ ಬುಟ್ಟಿಗಳಿದ್ದು, ಒಂದು ಬುಟ್ಟಿ ಹಸಿ ಕಸ ಸಂಗ್ರಹಕ್ಕೆ ಮತ್ತೊಂದು ಒಣ ಕಸಸಂಗ್ರಹಕ್ಕೆ ನಿಗದಿಪಡಿಸಲಾಗಿದೆ. ಸ್ಟೇನ್‌ಲೆಸ್ ಸ್ಟೀಲ್‌ನ ಈ ಬುಟ್ಟಿಗಳು ಫಳ ಫಳ ಹೊಳೆಯುತ್ತವೆ. ಈ ಬುಟ್ಟಿಗಳ ಮೇಲೆ ಹಸಿ ಕಸ (WET WASTE), ಒಣಕಸ( DRY WASTE) ಎಂದು ಬರೆಯಲಾಗಿದೆ.

ಈ ಬುಟ್ಟಿಗಳ ವಿಶೇಷತೆ ಎಂದರೆ ಮಳೆ ಮತ್ತು ಬಿಸಿಲಿನ ತಾಪಮಾನಕ್ಕೆ ಅಂದರೆ ಉಷ್ಣ ನಿರೋಧಕವಾಗಿದೆ. ಅಲ್ಲದೇ, ತುಕ್ಕು ಹಿಡಿಯುವುದಿಲ್ಲ. ಒಂದೊಂದು ಬುಟ್ಟಿಯಲ್ಲಿ 50 ಕೆ.ಜಿ ಕಸ ಸಂಗ್ರಹ ಸಾಮರ್ಥ್ಯ ಹೊಂದಿವೆ. ಎರಡೂ ಬುಟ್ಟಿಗಳಲ್ಲಿ 100 ಕೆ.ಜಿ ಕಸ ಸಂಗ್ರಹ ಆಗುತ್ತದೆ. ದಿನದಲ್ಲಿ ಒಮ್ಮೆ , ಎರಡು ದಿನಕ್ಕೊಮ್ಮೆ ಇದರಲ್ಲಿ ಕಸವನ್ನು ಪಾಲಿಕೆ ಕಸ ವಿಲೇವಾರಿ ಪೌರ ಕಾರ್ಮಿಕರು ವಿಲೇವಾರಿ ಮಾಡುತ್ತಾರೆ.

ಅತ್ಯಂತ ಕಡಿಮೆ ಸ್ಥಳದಲ್ಲಿ, ಯಾರಿಗೂ ಅಡಚಣೆ ಆಗದ ರೀತಿಯಲ್ಲಿ ಮತ್ತು ಆಯಕಟ್ಟಿನ, ಹೆಚ್ಚು ಕಸ ಬೀಳುವ ಸ್ಥಳಗಳನ್ನು ಗುರುತಿಸಿ ಇವುಗಳನ್ನು ಅಳವಡಿಸಲಾಗಿದೆ. ಕಬ್ಬಿಣದ ಎರಡು ಪಟ್ಟಿಗಳನ್ನು ನೆಲದಲ್ಲಿ ನಿಲ್ಲಿಸಿ ಕಾಂಕ್ರೀಟ್ ಹಾಕಿ ಆ ಪಟ್ಟಿಗೆ ಎರಡೂ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ.

ಮಹಾನಗರ, ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ, ಅಮಾನಿಕೆರೆ ರಸ್ತೆ ಸೇರಿದಂತೆ ಕೆಲ ಕಡೆ ಅಳವಡಿಸಿದ್ದು, ಒಟ್ಟು 160 ಕಡೆ ಇಂತಹ ಕಸದ ಬುಟ್ಟಿಗಳನ್ನು ಅಳವಡಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಯೋಜನೆ ರೂಪಿಸಿದೆ. ಒಂದು ಟ್ವಿನ್ ಕಸದ ಬುಟ್ಟಿ ಘಟಕಕ್ಕೆ ₹ 12000 ವೆಚ್ಚವಾಗಲಿದ್ದು, ವಿವಿಧಕಡೆ ಕಸದ ಬುಟ್ಟಿ ಅಳವಡಿಕೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.