ADVERTISEMENT

ಮಾದರಿ ಹೆಲಿಕಾಪ್ಟರ್, ಗಗನಯಾನ ದರ್ಶನ: ಆಕರ್ಷಕ ಫಲಪುಷ್ಪ ಪ್ರದರ್ಶನ

ಆಕರ್ಷಕ ಫಲಪುಷ್ಪ ಪ್ರದರ್ಶನ; ಹೂವಿನಿಂದ ನಿರ್ಮಾಣಗೊಂಡ ದೇಗುಲ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 8:49 IST
Last Updated 28 ಸೆಪ್ಟೆಂಬರ್ 2025, 8:49 IST
ಹೆಲಿಕಾ‍ಪ್ಟರ್ ಮಾದರಿ
ಹೆಲಿಕಾ‍ಪ್ಟರ್ ಮಾದರಿ   

ತುಮಕೂರು: ಎಚ್‌ಎಎಲ್ ನಿರ್ಮಿಸಿರುವ ಮಾದರಿ ಹೆಲಿಕಾಪ್ಟರ್; ಚಂದ್ರಲೋಕ ಸುತ್ತಿ ಬರುವ ಅವಕಾಶ; ಕೃತಕ ಬುದ್ಧಿಮತ್ತೆಯ ಚಮತ್ಕಾರ; ಪುಷ್ಪದಲ್ಲಿ ಅರಳಿರುವ ಅರಳುಗುಪ್ಪೆ ದೇಗುಲ, ಕಮ್ಮನಕೋಟೆಯ ಜಲಪಾತ, ಪುನಿತ್ ರಾಜ್‌ಕುಮಾರ್ ಪುತ್ಥಳಿ– ಹೀಗೆ ಒಂದಕ್ಕಿಂತ ಒಂದು ಚಂದದ ನೋಟ...

ಇದೆಲ್ಲವನ್ನೂ ಕಣ್ತುಂಬಿಕೊಳ್ಳಲು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಬರಬೇಕು.

ದಸರಾ ಅಂಗವಾಗಿ ಜಿಲ್ಲಾ ಆಡಳಿತ ಇದೇ ಮೊದಲ ಬಾರಿಗೆ ಆರಂಭಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.

ADVERTISEMENT

ಎಚ್‌ಎಎಲ್ ತೆರೆದಿರುವ ಮಳಿಗೆ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಹೆಲಿಕಾಪ್ಟರ್ ಮಾದರಿ, ಹೆಲಿಕಾಪ್ಟರ್ ತಯಾರಿಕೆ ವಿಧಾನ, ಕಾರ್ಯನಿರ್ವಹಣೆ, ವಿಶೇಷತೆ, ಬಳಕೆ ಮೊದಲಾದ ವಿಚಾರಗಳನ್ನು ತಿಳಿಸಿಕೊಡಲಿದೆ. ಒಮ್ಮೆ ಮಳಿಗೆಯಲ್ಲಿ ಸುತ್ತಾಡಿದರೆ ಎಚ್‌ಎಎಲ್ ಕಾರ್ಖಾನೆಗೆ ಹೋಗಿ ಬಂದ ಅನುಭವ ಸಿಗಲಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಗಮನ ಸೆಳೆಯುತ್ತಿದೆ.

ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಿರುವ ಯುವತಿ ಹಾಗೂ ಆಕೆಯ ಕಾರ್ಯ ವಿಧಾನ ಮತ್ತೊಂದು ವಿಶೇಷ. ಗ್ರಂಥಾಲಯ ಇಲಾಖೆಯ ಪುಸ್ತಕ ಮಳಿಗೆ ಸಹ ಸಾಕಷ್ಟು ಮಾಹಿತಿ ನೀಡಲಿದೆ.

ತಿಪಟೂರು ತಾಲ್ಲೂಕು ಅರಳಗುಪ್ಪೆ ಚೆನ್ನಕೇಶವ ದೇಗುಲದ ಮಾದರಿ ಪುಷ್ಪಗಳಿಂದ ಅರಳಿ ನಿಂತಿದೆ. ಹೂವಿನಿಂದ ವಿಧಾನಸೌಧವನ್ನೂ ನಿರ್ಮಿಸಲಾಗಿದೆ. ಪುನಿತ್ ರಾಜ್‌ಕುಮಾರ್ ಪುತ್ಥಳಿ ಸಹ ಆಕರ್ಷಕವಾಗಿದೆ. ಕಮ್ಮನಕೋಟೆ ಜಲಪಾತ, ಐಫಿಲ್ ಟವರ್, ಚೆರ್ರಿ ಹೂವಿನ ಗಿಡ, ತರಕಾರಿಗಳಿಂದ ಕೆತ್ತನೆ ಮಾಡಿರುವ ಕಲಾಕೃತಿಗಳು ಮುದ ನೀಡುತ್ತವೆ.

ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆ ಸಹ ಆಕರ್ಷಿಸುತ್ತದೆ. ಪಾರಂಪರಿಕ ಹಾಗೂ ಆಧುನಿಕ ಕೃಷಿ ಉಪಕರಣಗಳನ್ನು ಒಮ್ಮೆ ಕಣ್ತುಂಬಿಕೊಳ್ಳಬಹುದು. ಕೂರಿಗೆ, ಗೂಡೆ, ಊಜಿ, ಒನಕೆ, ನೊಗ, ಮೇಣಿ, ಬೀಸುವ ಕಲ್ಲು ಸೇರಿದಂತೆ ಕೃಷಿಯಲ್ಲಿ ಹಿಂದೆ ಬಳಸುತ್ತಿದ್ದ ವಸ್ತುಗಳಿಂದ ಹಿಡಿದು ಆಧುನಿಕ ಕೃಷಿ ಉಪಕರಣಗಳ ಮಾದರಿಗಳು ಕಾಣಸಿಗುತ್ತವೆ.

ಹೆಲಿಕಾ‍ಪ್ಟರ್ ಮಾದರಿ
ಹೆಲಿಕಾ‍ಪ್ಟರ್ ಮಾದರಿ ವೀಕ್ಷಿಸಿದ ಯುವಕರು
ಕ್ಷಿಪಣಿ ವೀಕ್ಷಣೆ
ಪುಷ್ಪದಲ್ಲಿ ಅರಳಿರುವ ಅರಳುಗುಪ್ಪೆ ದೇಗುಲ
ವಸ್ತುಪ್ರದರ್ಶನ ವೀಕ್ಷಿಸಿದ ವಿದ್ಯಾರ್ಥಿಗಳು
ವಸ್ತುಪ್ರದರ್ಶನ ವೀಕ್ಷಣೆ
ಹೆಲಿಕಾ‍ಪ್ಟರ್ ಮಾದರಿ

ಚಂದ್ರಯಾನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತೆರೆದಿರುವ ಮಳಿಗೆ ಮತ್ತೊಂದು ಆಕರ್ಷಣೆಯ ಕೇಂದ್ರವಾಗಿದೆ. ಮಳಿಗೆ ಮುಂದೆ ಒಮ್ಮೆ ನಿಂತರೆ ಚಂದ್ರಯಾನ ದರ್ಶನ ಮಾಡಿಸುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಏನೆಲ್ಲ ಸಾಧನೆ ಮಾಡಿದೆ ಹಿಂದೆ ಎದುರಿಸಿದ ಸವಾಲು ಮುಂದಿನ ಯೋಜನೆ ವಿಜ್ಞಾನ–ತಂತ್ರಜ್ಞಾನದ ಬೆಳವಣಿಗೆ ಮೊದಲಾದ ಮಾಹಿತಿ ಲಭ್ಯವಾಗಲಿದೆ. ಮಕ್ಕಳಿಗಂತೂ ಹೊಸ ವಿಚಾರಗಳು ಸಿಗಲಿವೆ. ಬೆಮಲ್ ಮಳಿಗೆ ಸಹ ಗಮನ ಸೆಳೆಯುತ್ತದೆ. ಆಧುನಿಕ ಯಂತ್ರೋಪಕರಣ ವಾಹನಗಳ ಮಾದರಿಯನ್ನು ಪರಿಚಯಿಸುತ್ತದೆ. ಇನ್ನೂ ಮೂರು ದಿನಗಳು ವಸ್ತು ಪ್ರದರ್ಶನ ವೀಕ್ಷಿಸಬಹುದಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ಮಾಹಿತಿ ಲಭ್ಯವಾಗಲಿದೆ.

ಆಹಾರ ಮೇಳ

ದಸರಾ ಅಂಗವಾಗಿ ಕಾಲೇಜು ಮೈದಾನದಲ್ಲಿ ಆಹಾರ ಮೇಳ ಆರಂಭವಾಗಿದೆ. ಶನಿವಾರ ಚಾಲನೆ ನೀಡಿದ್ದು ವೈವಿಧ್ಯಮಯ ಆಹಾರವನ್ನು ಸವಿಯುವ ಅವಕಾಶವಿದೆ. ಭಾನುವಾರದಿಂದ ವಿಶೇಷ ಖಾದ್ಯಗಳು ಸಿಗಲಿವೆ. ಮೈಸೂರು ದಸರಾ ಮಾದರಿಯಲ್ಲಿ ಜಿಲ್ಲಾ ಆಡಳಿತ ದಸರಾ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದರ ಭಾಗವಾಗಿ ಫಲಪುಷ್ಪ ಪ್ರದರ್ಶನ ವಸ್ತುಪ್ರದರ್ಶನ ಆಹಾರ ಮೇಳ ಏರ್ಪಡಿಸಲಾಗಿದೆ. ನವರಾತ್ರಿಯ ಕೊನೆ ದಿನವಾದ ಅ. 2ರಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಮೂರು ಆನೆಗಳು ಭಾಗವಹಿಸಲಿದ್ದು ನಗರ ಹಾಗೂ ಸುತ್ತಮುತ್ತಲಿನ ದೇವರ ಉತ್ಸವ ಮೂರ್ತಿಗಳು ಕಲಾ ತಂಡಗಳು ಪಾಲ್ಗೊಳ್ಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.