ADVERTISEMENT

ಗುಬ್ಬಿ: ‘ಇ–ಸ್ವತ್ತು’ ಸೇವೆಗೆ ತಪ್ಪದ ಹೆಣಗಾಟ

37 ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಪಡೆಯಲು ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:51 IST
Last Updated 22 ಜನವರಿ 2026, 5:51 IST
<div class="paragraphs"><p>ಗುಬ್ಬಿ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ</p></div>

ಗುಬ್ಬಿ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ

   

ಗುಬ್ಬಿ: ಸಾರ್ವಜನಿಕರ ಸ್ವತ್ತುಗಳಿಗೆ ಸುರಕ್ಷಿತ ಮತ್ತು ಸುಲಭ ದಾಖಲಾತಿ ಒದಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದ ‘ಮನೆ ಬಾಗಿಲಿನಲ್ಲೇ ಇ-ಸ್ವತ್ತು’ ಯೋಜನೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಗಿತಗೊಂಡಿದೆ.

ಯೋಜನೆ ಘೋಷಣೆ ದಿನದಿಂದಲೂ ಹಲವು ತಾಂತ್ರಿಕ ದೋಷಗಳು ಎದುರಾಗುತ್ತಿದೆ. ತಾಲ್ಲೂಕಿನ 37 ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರು ಈ ಸೇವೆ ಪಡೆಯಲು ಹೆಣಗಾಡುತ್ತಿದ್ದಾರೆ.

ADVERTISEMENT

ಸಾರ್ವಜನಿಕರು ಪ್ರತಿದಿನವೂ ಅಧಿಕಾರಿಗಳನ್ನು ಕಂಡು ಹಿಡಿಯಲು ಹೋಗುತ್ತಿದ್ದಾರೆ. ಅದು ಸಾಧ್ಯವಾಗದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಬಳಿ ದಿನಗಟ್ಟಲೇ ಕಾಯುವುದೇ ಅವರ ಕೆಲಸವಾಗಿದೆ. ಇದು ಸುಗ್ಗಿ ಕಾಲ. ಹೊಲ-ತೋಟಗಳ ಕೆಲಸ ಹೆಚ್ಚು. ನೀರಿಗೂ ಕಾಯಬೇಕು. ಕೆಲಸ ಬಿಟ್ಟು ಇಡೀದಿನ ಇಲ್ಲಿ ಕಾಯುವುದು ನಮ್ಮ ಗತಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಇ-ಖಾತೆ ಸೃಷ್ಟಿಗಾಗಿ ಸಿಟಿಜನ್ ಪೋರ್ಟಲ್ ಮೂಲಕ ದಾಖಲೆ ಆಲ್‌ಲೈನ್‌ ಅಪ್ಲೋಡ್ ಮಾಡುವ ವ್ಯವಸ್ಥೆ ಇದ್ದರೂ, ತಾಂತ್ರಿಕ ದೋಷ ಇದನ್ನು ನಿಷ್ಪ್ರಯೋಜನಗೊಳಿಸಿವೆ. ಯಾವ ದಾಖಲೆ ಅಗತ್ಯ, ಯಾವುವು ಅಲ್ಲ ಎಂಬ ಸ್ಪಷ್ಟ ಮಾರ್ಗದರ್ಶನದ ಕೊರತೆ ಸಾರ್ವಜನಿಕರನ್ನು ಹೆಚ್ಚು ಗೊಂದಲಕ್ಕೀಡು ಮಾಡಿದೆ.

‘ಮನೆ ಬಾಗಿಲಿಗೆ ಸೇವೆ ಎಂದಾಗ ಸಂತೋಷಪಟ್ಟೆವು. ಆದರೆ, ಈಗ ಏನಾಗುವುದೋ ಎಂಬ ಆತಂಕ ಕಾಡುತ್ತಿದೆ’ ಎಂದು ಸಾರ್ವಜನಿಕರು ಹೇಳುತ್ತಾರೆ.

ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಯೊಬ್ಬರು, ‘ಯೋಜನೆಯನ್ನು ಪ್ರಾರಂಭಿಸುವ ಮೊದಲು ಸಿಬ್ಬಂದಿಗೆ ಸಮರ್ಪಕ ತರಬೇತಿ ಮತ್ತು ತಾಂತ್ರಿಕ ಸಿದ್ಧತೆ ಅಗತ್ಯವಿತ್ತು. ಪ್ರಸ್ತುತ ತಂತ್ರಾಂಶಕ್ಕೆ ಸಿಬ್ಬಂದಿ ತರಬೇತಿ ಹೊಂದಿಕೆಯಾಗುತ್ತಿಲ್ಲ. ಮತ್ತೆ ತರಬೇತಿ ನೀಡಿದರೆ ಮಾತ್ರ ಯೋಜನೆ ಯಶಸ್ವಿಯಾಗಬಹುದು’ ಎಂದರು.

ತಾಂತ್ರಿಕ ದೋಷ‌ ನೇರ ಪರಿಣಾಮ ಬೀರುತ್ತಿದೆ. ಇ-ಖಾತೆ ಇಲ್ಲದಿರುವುದರಿಂದ ಬ್ಯಾಂಕ್ ಸಾಲ ದಕ್ಕುವುದಿಲ್ಲ. ಅಗತ್ಯ ಸಮಯದಲ್ಲಿ ಸ್ವತ್ತು ವಹಿವಾಟು ಕಷ್ಟವಾಗಿದೆ. ‘ತಾಂತ್ರಿಕ ದೋಷ ಸರಿಯಾಗುವವರೆಗೂ ಹಳೆ ಪದ್ಧತಿಯಲ್ಲಿ ಖಾತೆ ಮಾಡಿಕೊಡಬೇಕು ಎಂದು ಕೇಳಿದರೂ ಅಧಿಕಾರಿಗಳು ಒಪ್ಪುತ್ತಿಲ್ಲ. ಹಳೆಯದೂ ನಿಂತು ಹೊಸದೂ ಬಾರದೆ ಸಂಕಷ್ಟವಾಗಿದೆ ಎಂದು ಗ್ರಾಮೀಣರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಗೆ ಅರಿವು

ಸಾರ್ವಜನಿಕರು ಪದೇ ಪದೇ ಕಚೇರಿಗೆ ತಿರುಗಾಡುವುದನ್ನು ತಪ್ಪಿಸಲು ಆನ್‌ಲೈನ್‌ನಲ್ಲಿ ಯಾವ ರೀತಿ ದಾಖಲೆ ಗಣಕೀಕರಣಗೊಳಿಸಬೇಕು ಎನ್ನುವ ಅರಿವು ಮೂಡಿಸಲು ತಾಲ್ಲೂಕಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ಇರುವ ತಾಂತ್ರಿಕ ದೋಷವನ್ನು ತಾಲ್ಲೂಕು ಹಂತದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಮೇಲಿನಿಂದ ಆದೇಶ ಬರುವವರೆಗೂ ಕಾಯಲೇಬೇಕಾದ ಅನಿವಾರ್ಯತೆ ಇದೆ. ಸಾರ್ವಜನಿಕರು ಸಹಕರಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಇ.ಒ ರಂಗನಾಥ್.

ಸಣ್ಣಪುಟ್ಟ ತೊಂದರೆ ಇದೆ 

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ತಾಂತ್ರಿಕ ತೊಂದರೆ ಇದೆ. ಸರ್ವರ್‌ ಯಾವುದೇ ತೊಂದರೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಪಟ್ಟಣದಲ್ಲಿ ಈಗಾಗಲೇ 5 ಸಾವಿರಕ್ಕೂ ಹೆಚ್ಚಿನ ಸ್ವತ್ತುಗಳಿಗೆ ಇ- ಖಾತೆ ಮಾಡಲಾಗಿದೆ. ಉಳಿದ ಸ್ವತ್ತುಗಳ ಮಾಲೀಕರು ಅಗತ್ಯ ದಾಖಲೆ ಒದಗಿಸಿದರೆ ಶೀಘ್ರವಾಗಿ ಖಾತೆ ಮಾಡಿಕೊಡಲು ಸಿದ್ಧ ಇರುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.