ADVERTISEMENT

ಪಾವಗಡ | 24 ಮಂದಿ ಅಸ್ವಸ್ಥ: ಕಳ್ಳಬಟ್ಟಿ ಸೇವನೆ ಶಂಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 15:44 IST
Last Updated 20 ಆಗಸ್ಟ್ 2024, 15:44 IST
ಪಾವಗಡ ತಾಲ್ಲೂಕಿನ ನಾಗೇನಹಳ್ಳಿ ತಾಂಡಾಗೆ ಮಂಗಳವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್‌ ವರದರಾಜು, ತಾ.ಪಂ ಇಒ ಜಾನಕಿರಾಂ ಇತರರು ಹಾಜರಿದ್ದರು
ಪಾವಗಡ ತಾಲ್ಲೂಕಿನ ನಾಗೇನಹಳ್ಳಿ ತಾಂಡಾಗೆ ಮಂಗಳವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್‌ ವರದರಾಜು, ತಾ.ಪಂ ಇಒ ಜಾನಕಿರಾಂ ಇತರರು ಹಾಜರಿದ್ದರು   

ಪಾವಗಡ: ತಾಲ್ಲೂಕಿನ ಶ್ರೀರಂಗಪುರ ತಾಂಡಾದಲ್ಲಿ ಈಚೆಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 24 ಜನ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದು, ಕಳ್ಳಬಟ್ಟಿ ಸೇವನೆಯ ಶಂಕೆ ವ್ಯಕ್ತವಾಗಿದೆ.

ಆ.14 ಮತ್ತು 15ರಂದು ತಾಲ್ಲೂಕಿನ ನಾಗೇನಹಳ್ಳಿ ತಾಂಡಾದಲ್ಲಿ ಮದುವೆ ನಡೆದಿತ್ತು. ವಿವಾಹವಾದ ಮರು ದಿನ ಆ.16ರಂದು ಶ್ರೀರಂಗಪುರ ತಾಂಡಾದಲ್ಲಿ ‘ಬೀಗರ ಊಟ’ ಆಯೋಜಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್‌ ತೆರಳಿದ ನಾಗೇನಹಳ್ಳಿ ತಾಂಡಾದ ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಹೊಟ್ಟೆ ನೋವು, ಭೇದಿಯಾಗಿ ಶುಕ್ರವಾರ ರಾತ್ರಿಯಿಂದ ಭಾನುವಾರದ ವರೆಗೆ 24 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ತೀವ್ರ ಅಸ್ವಸ್ಥರಾಗಿದ್ದ ನಾಗೇನಹಳ್ಳಿ ತಾಂಡಾದ ರಮೀಬಾಯಿ (76) ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಶ್ವಾಸಕೋಶದ ಸಮಸ್ಯೆ, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ. ಬೆಂಗಳೂರು, ಪಾವಗಡ, ಹಿಂದೂಪುರದಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ಹೊರೆತುಪಡಿಸಿದರೆ ಉಳಿದವರು ಆರೋಗ್ಯವಾಗಿದ್ದಾರೆ.

ADVERTISEMENT

‘ಕಾರ್ಯಕ್ರಮದಲ್ಲಿ ವಿತರಿಸಿದ ನೀರು, ಊಟದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಕಳ್ಳಬಟ್ಟಿ ಸೇವಿಸಿ ಅಸ್ವಸ್ಥರಾಗಿರಬಹುದು’ ಎಂದು ಮೂಲಗಳು ತಿಳಿಸಿವೆ.

ನಾಗೇನಹಳ್ಳಿ ತಾಂಡಾಗೆ ಮಂಗಳವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಂಡಾದ ಜನರಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್‌ ವರದರಾಜು, ತಾ.ಪಂ ಇಒ ಜಾನಕಿರಾಂ, ತಾಲ್ಲೂಕು ವೈದ್ಯಾಧಿಕಾರಿ‌ ಕಿರಣ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.