ADVERTISEMENT

ಆತ್ಮಹತ್ಯೆಗೆ ಯತ್ನಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಭೇಟಿಯಾದ ಸುರೇಶ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 5:24 IST
Last Updated 17 ಜುಲೈ 2021, 5:24 IST
ಸಚಿವ ಸುರೇಶ್‌ ಕುಮಾರ್‌ ಅವರ ಸಾಂದರ್ಭಿಕ ಚಿತ್ರ
ಸಚಿವ ಸುರೇಶ್‌ ಕುಮಾರ್‌ ಅವರ ಸಾಂದರ್ಭಿಕ ಚಿತ್ರ   

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸಿದ ಕೊರಟಗೆರೆ ಪಟ್ಟಣದ ವಿದ್ಯಾರ್ಥಿನಿಯೊಬ್ಬರ ಮನೆಗೆ ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಶನಿವಾರ ಬೆಳಿಗ್ಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿ ಅಭ್ಯಾಸ ಮಾಡುತ್ತಿದ್ದರು. ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಗಮನಿಸಿ ಸಚಿವರು ಭೇಟಿ ನೀಡಿದರು.

ಕೋವಿಡ್ ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿನಿ 10ನೇ ತರಗತಿಯ ಶುಲ್ಕ ಪಾವತಿಸಿ, ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಲ್ಕವನ್ನೂ ಪಾವತಿಸಿ ನೋಂದಣಿ ಮಾಡಿಸಿಲ್ಲ. ಕೋವಿಡ್‌ನಿಂದಾಗಿ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಾಲಕಿ ಆತ್ಮಹತ್ಯೆಗೆ ಮುಂದಾಗಿದ್ದರು ಎನ್ನಲಾಗಿದೆ.

ADVERTISEMENT

ಬಾಲಕಿ ಮನೆಗೆ ಭೇಟಿ ನೀಡಿದ ಸಚಿವರು ಸಾಂತ್ವನ ಹೇಳಿದರು. ಮುಂದಿನ ಆಗಸ್ಟ್‌ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಆಗ ಅವಕಾಶ ಮಾಡಿಕೊಡಲಾಗುವುದು. ನಿಮ್ಮಂತೆಯೇ ಕೋವಿಡ್ ಸಮಯದಲ್ಲಿ ಸಾಕಷ್ಟು ಮಕ್ಕಳಿಗೆ ಸಮಸ್ಯೆ ಆಗಿರುತ್ತದೆ. ಪೂರಕ ಪರೀಕ್ಷೆ ಬರೆದವರನ್ನೂ ಮೊದಲ ಬಾರಿಗೆ ಪರೀಕ್ಷೆ ಬರೆದವರು ಎಂದೇ ಪರಿಗಣಿಸಲಾಗುವುದು. ಶುಲ್ಕದ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.